ADVERTISEMENT

‘ಬಿಜೆಪಿಯಂಥ ಕೊಳಕರು ಎಲ್ಲೂ ಇಲ್ಲ’: ಸಿದ್ದರಾಮಯ್ಯ

ವರಸಿದ್ಧಿ ವಿನಾಯಕ ದೇವಸ್ಥಾನ ಲೋಕಾರ್ಪಣೆ, ಅತಿಥಿಗೃಹ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 5:00 IST
Last Updated 9 ನವೆಂಬರ್ 2021, 5:00 IST
ಮಂಡ್ಯ ನಗರದ ಜಿಲ್ಲಾ ಕುರುಬರ ಸಂಘದ ಆವರಣದಲ್ಲಿ ವರಸಿದ್ಧಿ ವಿನಾಯಕ ದೇವಸ್ಥಾನ ಲೋಕಾರ್ಪಣೆ ಹಾಗೂ ಅತಿಥಿಗೃಹದ ಉದ್ಘಾಟನೆಯನ್ನು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೆರವೇರಿಸಿದರು. ಎನ್‌.ಚೆಲುವರಾಯಸ್ವಾಮಿ, ಎಂ.ಎಸ್‌.ಆತ್ಮಾನಂದ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಎಂ.ಎಸ್‌.ಸುರೇಶ್‌ ಇದ್ದರು (ಎಡಚಿತ್ರ). ಸಮಾರಂಭದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ಮಂಡ್ಯ ನಗರದ ಜಿಲ್ಲಾ ಕುರುಬರ ಸಂಘದ ಆವರಣದಲ್ಲಿ ವರಸಿದ್ಧಿ ವಿನಾಯಕ ದೇವಸ್ಥಾನ ಲೋಕಾರ್ಪಣೆ ಹಾಗೂ ಅತಿಥಿಗೃಹದ ಉದ್ಘಾಟನೆಯನ್ನು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೆರವೇರಿಸಿದರು. ಎನ್‌.ಚೆಲುವರಾಯಸ್ವಾಮಿ, ಎಂ.ಎಸ್‌.ಆತ್ಮಾನಂದ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಎಂ.ಎಸ್‌.ಸುರೇಶ್‌ ಇದ್ದರು (ಎಡಚಿತ್ರ). ಸಮಾರಂಭದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು   

ಮಂಡ್ಯ: ‘ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದವರ ಪಕ್ಷಕ್ಕೆ ಹೋಗುತ್ತಿದ್ದಾರೆ ಎಂದು ನಾನು ಭಾಷಣದಲ್ಲಿ ಹೇಳಿದ್ದೆ. ಅದನ್ನು ತಿರುಚಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯಂಥ ಕೊಳಕರು ಎಲ್ಲೂ ಇಲ್ಲ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕುರುಬರ ಸಂಘದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವರಸಿದ್ಧಿ ವಿನಾಯಕ ದೇವಸ್ಥಾನ ಲೋಕಾರ್ಪಣೆ, ಅತಿಥಿಗೃಹ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಬಿಜೆಪಿಯವರು ಹಿಂದುಳಿದ ಜಾತಿಗಳ ವಿರೋಧಿಗಳು. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕೊಟ್ಟಿದ್ದು ನಾವು. ಹಾಗಾಗಿ ಇವತ್ತು ಬಿಸಿಎಂ-ಎ, ಬಿ ಮೀಸಲಾತಿಯಿಂದ ಹಲವರು ಗೆದ್ದಿದ್ದಾರೆ.ನಾವು ಕೊಟ್ಟ ಮೀಸಲಾತಿ ವಿರುದ್ಧ ಬಿಜೆಪಿಯವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಅಲ್ಲಿ ಕೋರ್ಟ್ ಅವರ ಮನವಿ ವಿರುದ್ಧ ತೀರ್ಪು ಕೊಟ್ಟುನಮ್ಮ ಆದೇಶ ವನ್ನು ಎತ್ತಿ ಹಿಡಿಯಿತು’ ಎಂದರು.

ADVERTISEMENT

‘ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಬಡವರ ಪರ ಯೋಜನೆ ಬೇಕಾದರೆ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಗಳಿಗೆ ಮತ ನೀಡಬೇಕು. ಜಿಲ್ಲೆಯಲ್ಲಿ ಏಳಕ್ಕೆ ಏಳು ಕಾಂಗ್ರೆಸ್ ಗೆಲ್ಲಬೇಕು. ಕೇವಲ ಘೋಷಣೆ ಕೂಗಿದರೆ ಸಾಲದು’ ಹೇಳಿದರು.

‘ಎಲ್ಲ ಜಾತಿಯಲ್ಲೂ ಬಡವರಿದ್ದಾರೆ.ಹೀಗಾಗಿ ಎಲ್ಲ ಜಾತಿಯ ಬಡವರ ಅಭಿವೃದ್ಧಿ ಆಗಬೇಕು.ನಾನು ಕೊಟ್ಟ ಯೋಜನೆಗಳು ಒಂದು ಜಾತಿಗೆ ಸೀಮಿತವಾಗಿಲ್ಲ.ಅವಕಾಶದಿಂದ ವಂಚಿತರಾದವರ ಪರ ಕೆಲಸ ಮಾಡಿದ್ದೇನೆ.ಆದರೂ ಸಿದ್ದರಾಮಯ್ಯ ಜಾತಿ ಮಾಡುತ್ತಾನೆ ಎನ್ನುತ್ತಾರೆ. ಕೆಂಪೇ ಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು, ಭಗೀರಥ, ಕೃಷ್ಣ, ಜೈನ ಜಯಂತಿ ಮಾಡಿದ್ದು ನಾನು’ ಎಂದು ಪ್ರತಿಪಾದಿಸಿದರು.

ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ,ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳದಲ್ಲಿ ಸಿದ್ದರಾಮಯ್ಯ ಬಗ್ಗೆ ಅಭಿಮಾನ ಹೆಚ್ಚಿದೆ. ಇದನ್ನು ಕಂಡ ವರಿಷ್ಠರಾದ ರಾಹುಲ್‌ಗಾಂಧಿ ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿದ್ದರು. ಆದರೆ,ಕರ್ನಾಟಕ ಬಿಟ್ಟು ರಾಜಕಾರಣ ಮಾಡಲ್ಲ ಎಂದಿರುವ ಸಿದ್ದರಾಯಮ್ಮ ಅವರು ಉದಾರ ಮನಸ್ಸಿನವರು ಎಂದರು.

ಜಾತಿ ಒಳ್ಳೆಯದಕ್ಕೆ ಉಪಯೋಗ ಆಗಬೇಕು.ಜಾತಿ ಹೆಸರಲ್ಲಿ ಕೆಲವರು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಜನಪರ ಕಾರ್ಯ ಯಾರು ಕೊಡುತ್ತಾರೆ ಎನ್ನುವುದು ಮುಖ್ಯವಾಗಬೇಕು. ಸಿದ್ದರಾಮಯ್ಯ ಅವರಲ್ಲಿ ಎಲ್ಲರಿಗೂ ಪ್ರೀತಿ ಹಂಚುವ ಮನಸ್ಸು ಹಾಗೂವ್ಯಕ್ತಿ ಗೌರವಿಸುವಲ್ಲಿ ಪ್ರಮುಖರಾಗಿ ಕಾಣುತ್ತಾರೆ ಎಂದರು.

ಕಲಬುರಗಿ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದಪುರಿ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ, ಮುಖಂಡರಾದ ದಡದಪುರದ ಶಿವಣ್ಣ, ಮಧು ಜಿ.ಮಾದೇಗೌಡ, ಮಹೇಶ್, ಸಂಘದ ಜಿಲ್ಲಾಧ್ಯಕ್ಷ ಎಂ.ಎನ್‌.ಸುರೇಶ್‌, ಉಪಾಧ್ಯಕ್ಷ ಶ್ರೀನಿವಾಸ್ ಭಾಗವಹಿಸಿದ್ದರು.

‘ಮೈಷುಗರ್‌ ಸ್ಥ‌ಗಿತಕ್ಕೆ ಜೆಡಿಎಸ್‌ ಕಾರಣ’

‘ಜಿಲ್ಲೆಯಲ್ಲಿ ಜೆಡಿಎಸ್‌ನ ಏಳು ಶಾಸಕರನ್ನು ಗೆಲ್ಲಿಸಿದರೂ ಮೈಷುಗರ್ ಕಾರ್ಖಾನೆ ಆರಂಭವಾಗಲಿಲ್ಲ. ಆದರೆ, ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಮೈಷುಗರ್‌ ಪುನಶ್ಚೇತನಕ್ಕೆ ಮುಂದಾಗಿದ್ದರು. ಹಾಸನಕ್ಕೆ ಕೊಡುವ ಪ್ರಾಮುಖ್ಯತೆ ಮಂಡ್ಯಕ್ಕೆ ಕೊಟ್ಟಿಲ್ಲ. ಈ ಜಿಲ್ಲೆಯಲ್ಲಿ ಸಣ್ಣಪುಟ್ಟ ಅಭಿವೃದ್ಧಿ ಆಗಿದ್ದರೆ ಅದು ಜೆಡಿಎಸ್‌ನಿಂದ ಅಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು. ಇವತ್ತು ಮೈಷುಗರ್‌ ಸ್ಥಗಿತಗೊಳ್ಳಲು ಜೆಡಿಎಸ್ ಕಾರಣ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.