ADVERTISEMENT

ಬಿಜೆಪಿ ನಾಯಕರು ಪಕ್ಷದೊಳಗಿನ ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳಲಿ: ಚಲುವರಾಯಸ್ವಾಮಿ

ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 6:08 IST
Last Updated 16 ಆಗಸ್ಟ್ 2025, 6:08 IST
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ   

ಮಂಡ್ಯ: ‘ಕೆ.ಎನ್‌. ರಾಜಣ್ಣ ವಜಾ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಮೊದಲು ಅವರ ಪಕ್ಷದೊಳಗಿನ ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳಲಿ. ಬಸನಗೌಡ ಪಾಟೀಲ ಯತ್ನಾಳ್, ಕುಮಾರ ಬಂಗಾರಪ್ಪ, ರಮೇಶ್ ಜಾರಕಿಹೋಳಿ ಬಗ್ಗೆ ಗಮನ ಹರಿಸಲಿ. ರಾಜ್ಯ ಘಟಕದ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರ ಬದಲಾವಣೆ ಬಗ್ಗೆ ಅವರ ಪಕ್ಷದವರೇ ಪಿಸುಗುಡುತ್ತಿದ್ದಾರೆ’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. 

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಧರ್ಮಸ್ಥಳ ಕ್ಷೇತ್ರ, ಆ ಸಂಸ್ಥೆಯ ಮಾಲೀಕರ ಬಗ್ಗೆ ನಮಗೆ ಯಾವುದೇ ಅಸಮಾಧಾನ, ತಕರಾರಿಲ್ಲ. ನಮಗೂ ಉತ್ತಮ ಭಾವನೆ ಮತ್ತು ಗೌರವವಿದೆ. ಕೆಲವು ಸಂಘಟನೆಗಳ ಒತ್ತಾಯದ ಮೇರೆಗೆ ಎಸ್‌ಐಟಿ ರಚನೆಯಾಗಿ, ತನಿಖೆ ನಡೆಯುತ್ತಿದೆ. ಈ ಬಗ್ಗೆ ಸಿಎಂ ಮತ್ತು ಗೃಹಸಚಿವರ ತೀರ್ಮಾನ ತೆಗೆದುಕೊಳ್ಳುತ್ತಾರೆ. ವಿರೋಧ ಪಕ್ಷದವರು ಸರ್ಕಾರವನ್ನು ದೂರುವುದರಲ್ಲಿ ಹುರುಳಿಲ್ಲ’ ಎಂದರು. 

‘ಕೆ.ಎನ್‌. ರಾಜಣ್ಣ ಅವರಿಂದ ತೆರವಾದ ಸಚಿವ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬ ಬಗ್ಗೆ ಹೈಕಮಾಂಡ್‌ ಮತ್ತು ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಜಿಲ್ಲೆಯ ಹಿರಿಯ ರಾಜಕಾರಣಿ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮೆಲ್ಲರ ಬಯಕೆಯಾಗಿದೆ. ನಮ್ಮ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಕ್ಕರೆ ಸಂತೋಷ’ ಎಂದರು. 

ADVERTISEMENT

ಜಿಲ್ಲಾಧಿಕಾರಿ ಆಡಿಯೊ ವೈರಲ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ‘ಆಡಿಯೊವನ್ನು ನಾನು ಕೇಳಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರ ಗಮನಕ್ಕೆ ತರಲಾಗುವುದು. ನಂತರ ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ’ ಎಂದು ಹೇಳಿದರು. 

ಪ್ರಜ್ವಲ್‌ ಮತ್ತು ದರ್ಶನ್‌ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಮಾನದಿಂದ ಜನರಿಗೆ ನ್ಯಾಯಾಂಗದ ಬಗ್ಗೆ ಗೌರವ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ, ‘ನಟ ದರ್ಶನ್ ಅವರಿಗೆ ಅನಾರೋಗ್ಯ ಕಾರಣದಿಂದ ಜಾಮೀನು ನೀಡಿದ್ದರು. ಈಗ ನ್ಯಾಯಾಲಯ ಜಾಮೀನು ರದ್ದುಪಡಿಸಿದೆ. ಎಷ್ಟೇ ದೊಡ್ಡವರಿರಲಿ ಎಲ್ಲರೂ ನ್ಯಾಯಾಲಯದ ತೀರ್ಮಾನಕ್ಕೆ ತಲೆಬಾಗಲೇಬೇಕು’ ಎಂದರು. 

ರಾಜ್ಯದಲ್ಲಿನ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಬೇಕಾದ ಗೌರವಧನ ಬಾಕಿ ಇದ್ದು, ಕೂಡಲೇ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಚಾರ ತಂದು, ಹಣ ಬಿಡುಗಡೆ ಮಾಡಿಸುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.