ADVERTISEMENT

ಮಂಡ್ಯ: ಬಿಜೆಪಿ ಶಾಸಕ ನಿರಾಣಿಗೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 13:45 IST
Last Updated 6 ಜೂನ್ 2020, 13:45 IST
ಪಿಎಸ್‌ಎಸ್‌ಕೆ ನೋಟ
ಪಿಎಸ್‌ಎಸ್‌ಕೆ ನೋಟ   

ಪಾಂಡವಪುರ: ಸಹಕಾರಿ ಕ್ಷೇತ್ರದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಯನ್ನು ಸರ್ಕಾರ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಅವರ ಮಾಲೀಕತ್ವದ ನಿರಾಣಿ ಶುಗರ್ಸ್‌ಗೆ ವಹಿಸಿದೆ.

ಪಿಎಸ್‌ಎಸ್‌ಕೆಯನ್ನು ಖಾಸಗೀಕರಣ ಮಾಡುವ ಕುರಿತು ಈಚೆಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಜೂನ್‌ 5ರಂದು ನಡೆದ ಬಿಡ್‌ನಲ್ಲಿ ನಿರಾಣಿ ಶುಗರ್ಸ್‌ಗೆ ಕಾರ್ಖಾನೆಯ ಮಾಲೀಕತ್ವ ದೊರೆತಿದೆ.

ಸಕ್ಕರೆ ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಹೆಸರು ಮಾಡಿದ್ದ ಪಿಎಸ್‌ಎಸ್‌ಕೆಯನ್ನು 2006ರಲ್ಲಿ ಕೊಠಾರಿ ಶುಗರ್ಸ್‌ಗೆ ವಹಿಸಲಾಗಿತ್ತು. ಒಂದೆರಡು ವರ್ಷದ ನಂತರ ಸ್ಥಗಿತಗೊಂಡಿತು. 2010ರಲ್ಲಿ ಕಾರ್ಖಾನೆಯನ್ನು ಮಂಡ್ಯದ ಮೈಷುಗರ್ ಕಂಪನಿಗೆ ವಹಿಸಲಾಗಿತ್ತು. ಅಂದಿನ ಮುಖ್ಯಮಂ‌ತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಖಾನೆಯ ಪುನಶ್ವೇತನಕ್ಕೆ ₹ 50 ಕೋಟಿ ಹಣ ನೀಡಿದ್ದರು. ಮೂರು ವರ್ಷ ನಡೆದ ಕಾರ್ಖಾನೆ ಮತ್ತೆ ಸ್ಥಗಿತೊಂಡಿತು.

ADVERTISEMENT

2014ರಲ್ಲಿ ಪಿಎಸ್‌ಎಸ್‌ಕೆ ಮತ್ತೆ ಸಹಕಾರಿ ಆಡಳಿತ ಮಂಡಳಿಗೆ ಒಳಪಟ್ಟಿತು. ಮೂರು ವರ್ಷ ನಡೆದ ಕಾರ್ಖಾನೆ ಸಾಲದ ಸುಳಿಯಲ್ಲಿ ಸಿಲುಕಿ ಬಂದ್‌ ಆಯಿತು. 2019ರ ಜನವರಿಯಲ್ಲಿ ನಡೆದ ಷೇರುದಾರರ ಸಭೆಯಲ್ಲಿ ಕಾರ್ಖಾನೆಯನ್ನು ಖಾಸಗಿ ಮಾಲೀಕತ್ವಕ್ಕೆ ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು.

‘ನಿರಾಣಿ ಶುಗರ್ಸ್‌ ಆಡಳಿತ ಮಂಡಳಿ ಅತೀ ಹೆಚ್ಚು ಹಣಕ್ಕೆ ಬಿಡ್‌ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರಿಗೆ ಮಾಲೀಕತ್ವ ನೀಡಿದೆ. ಇದೇ ಹಂಗಾಮಿನಲ್ಲಿ ಕಾರ್ಖಾನೆ ಆರಂಭಿಸಲು ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.