ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಮತ್ತು ಆಸುಪಾಸಿನ ಗ್ರಾಮಗಳಲ್ಲಿ ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಂಡಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಪಾಲಹಳ್ಳಿಯ ಶಂಕರೇಗೌಡ, ಯೋಗೇಶ್, ಮಂಜು, ಇನಾಸಪ್ಪ, ನಾಗರಾಜು ಇತರರ ತೆಂಗಿನ ತೋಟಗಳಿಗೆ ಈ ಬಾಧೆ ಹರಡಿದೆ. ಒಂದು ವರ್ಷದ ಹಿಂದೆ ಅಲ್ಲಲ್ಲಿ ಕಾಣಿಸಿಕೊಂಡ ಈ ರೋಗ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ.
ರೋಗ ಪೀಡಿತ ತೆಂಗಿನ ಮರಗಳ ಗರಿಗಳು ಒಣಗುತ್ತಿದ್ದು, ಕಾಯಿ ಕಟ್ಟುತ್ತಿಲ್ಲ. ಮುಷ್ಟಿ ಗಾತ್ರದ ಹರಳುಗಳು ಉದುರುತ್ತಿವೆ. ಇಳುವರಿ ಸಂಪೂರ್ಣ ಕುಸಿದಿದೆ. ವರ್ಷದ ಹಿಂದೆ ಕೆಆರ್‌ಎಸ್, ಹೊಂಗಹಳ್ಳಿ, ಮಜ್ಜಿಗೆಪುರ ಭಾಗದಲ್ಲಿ ಕಪ್ಪು ತಲೆ ಹುಳು ಬಾಧೆ ಈಗ ಪಾಲಹಳ್ಳಿ ಸುತ್ತಮುತ್ತ ಕಾಣಿಸಿಕೊಂಡಿದೆ. ತೋಟದಿಂದ ತೋಟಕ್ಕೆ ವೇಗವಾಗಿ ಹರಡುತ್ತಿದೆ.
‘ತೆಂಗಿನ ಮರಗಳಿಗೆ ಕಪ್ಪು ತಲೆ ಹುಳು ಬಾಧೆ ಕಾಣಿಸಿಕೊಂಡ ತಕ್ಷಣ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದೆವು. ರೋಗ ಪೀಡಿತ ತೋಟಕ್ಕೆ ಪರತಂತ್ರ ಜೀವಿಗಳನ್ನು ಬಿಡುವಂತೆ ಅಧಿಕಾರಿಗಳು ಸಲಹೆ ನೀಡಿದ್ದರು. ಅದರಿಂದ ಏನೂ ಪ್ರಯೋಜನ ಆಗಿಲ್ಲ. ಮರಗಳು ಒಣಗಿದ ಪೊರಕೆಯಂತಾಗಿದ್ದು ಎಳನೀರು, ಕಾಯಿ ಬಿಡುತ್ತಿಲ್ಲ. ತೋಟದ ಉಳುಮೆ, ಗೊಬ್ಬರ, ಕೂಲಿಗೆ ಮಾಡಿದ ಖರ್ಚು ಕೂಡ ಸಿಗುತ್ತಿಲ್ಲ’ ಎಂದು ಪಾಲಹಳ್ಳಿಯ ರೈತ ಶಂಕರೇಗೌಡ ಸಮಸ್ಯೆ ತೋಡಿಕೊಂಡರು.
‘ತಾಲ್ಲೂಕಿನ ಹೊಂಗಹಳ್ಳಿ ಸುತ್ತಮುತ್ತ ತೆಂಗಿನ ಮರಗಳಿಗೆ ಹರಡಿದ್ದ ಕಪ್ಪು ತಲೆ ಹುಳು ಬಾಧೆ ಹತೋಟಿಗೆ ಬಂದಿದೆ. ಪಾಲಹಳ್ಳಿಯ ರೋಗಪೀಡಿತ ತೆಂಗಿನ ತೋಟಗಳಿಗೆ ಒಂದೆರಡು ದಿನಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಅಗತ್ಯ ಕಂಡುಬಂದರೆ ಗೋನಿಯೋಜಸ್ ಪರತಂತ್ರ ಜೀವಿಗಳನ್ನು ಬಿಡಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಹೆಚ್ಚುವರಿ ಸಹಾಯಕ ನಿರ್ದೇಶಕ ತಿಮ್ಮೇಗೌಡ ತಿಳಿಸಿದರು.
Highlights - ತೋಟದಿಂದ ತೋಟಕ್ಕೆ ವೇಗವಾಗಿ ಹರಡುತ್ತಿರವ ರೋಗ ಹೊಂಗಹಳ್ಳಿ ಸುತ್ತಮುತ್ತ ಹುಳು ಬಾಧೆ ಹತೋಟಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.