ಶ್ರೀರಂಗಪಟ್ಟಣ: ಪ್ರಸಿದ್ಧ ಪ್ರವಾಸಿ ತಾಣ ತಾಲ್ಲೂಕಿನ ಕೆಆರ್‌ಎಸ್‌ನ ಬೃಂದಾವನದ ಬಳಿ ಸರ್ಕಾರ ನಡೆಸಲು ಉದ್ದೇಶಿಸಿರುವ ಕಾವೇರಿ ಆರತಿ ಕಾರ್ಯಕ್ರಮದ ನೀಲ ನಕ್ಷೆ ಸಿದ್ಧವಾಗಿದೆ.
ಕೆಆರ್‌ಎಸ್‌ನ ಬೃಂದಾವನಕ್ಕೆ ಹೊಂದಿಕೊಂಡಿರುವ ದೋಣಿ ವಿಹಾರ ಕೇಂದ್ರದ ಸಮೀಪದ ಕಾವೇರಿ ಆರತಿಗೆ ಜಾಗವನ್ನು ಗುರುತಿಸಲಾಗಿದ್ದು, ಶಾಸಕ ರಮೇಶ ಬಂಡಿಸಿದ್ದೇಗೌಡ ಮತ್ತು ಉನ್ನತ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಉಪ್ಪಾರ್ ಆ್ಯಂಡ್ ಸನ್ಸ್ ಕಂಪೆನಿ ಟೆಂಡರ್ ಪಡೆದಿದ್ದು, ಉದ್ದೇಶಿತ ಕಾರ್ಯಕ್ರಮದ ಕಾಮಗಾರಿ ಕೆಲವೇ ದಿನಗಳ ಆರಂಭವಾಗಲಿದೆ.
8 ಸಾವಿರ ಆಸನಗಳು:
ಕಾವೇರಿ ಆರತಿ ನಡೆಯುವ ಸ್ಥಳದಲ್ಲಿ 8 ಸಾವಿರ ಮಂದಿ ಕುಳಿತು ಏಕ ಕಾಲಕ್ಕೆ ಆರತಿ ನಡೆಯುವುದನ್ನು ವೀಕ್ಷಿಸಲು ಅನುಕೂಲ ಆಗುವಂತೆ ಪ್ಲಾಟ್‌ಫಾರ್ಮ್ ಸಿದ್ದವಾಗಲಿದೆ. ಸದಾಕಾಲ ನೀರು ಹರಿಯುವ ಜಾಗದಲ್ಲಿ ಆರತಿ ನಡೆಸಲು 45/45 ಮೀಟರ್ ಹಾಗೂ ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಲು 175/175 ಮೀಟರ್ ಅಳತೆಯ ಫ್ಲಾಟ್‌ಫಾರ್ಮ್ ನಿರ್ಮಾಣವಾಗಲಿದೆ. ನಾಲ್ಕೂ ದಿಕ್ಕುಗಳಿಂದ ಜನರು ಕಾರ್ಯಕ್ರಮ ವೀಕ್ಷಿಸಲು ಯೋಜಿಸಲಾಗಿದೆ. ಜಲ ಸಂಪನ್ಮೂಲ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ, ₹92.3 ಕೋಟಿ ವೆಚ್ಚದ ಅಂದಾಜು ತಯಾರಾಗಿದೆ.
ಸಂಗೀತ ಕಾರಂಜಿ:
‘ಕಾವೇರಿ ಆರತಿ ನಡೆಯುವ ಸ್ಥಳದಲ್ಲಿ ಎಲ್ಇಡಿ ಪರದೆಯನ್ನು ಅಳವಡಿಸಲಾಗುತ್ತದೆ. ಆಧುನಿಕ ಸಂಗೀತ ನೃತ್ಯ ಕಾರಂಜಿ, ಅಲಂಕೃತ ವಿದ್ಯುತ್ ದೀಪಗಳ ಅಳವಡಿಕೆ ಕೂಡ ಈ ಯೋಜನೆಯಲ್ಲಿ ಸೇರಿವೆ. ಸಂಗೀತ ಕಾರ್ಯಕ್ರಮಗಳೂ ನಡೆಯಲಿವೆ’ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಜಯಂತ್ ತಿಳಿಸಿದ್ದಾರೆ.
ಪ್ರಾಧಿಕಾರ ರಚನೆ:
‘ಕಾವೇರಿ ಆರತಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೆಆರ್‌ಎಸ್ ಆಸುಪಾಸಿನ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ಪ್ರಾಧಿಕಾರವನ್ನು ರಚಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈ ಪ್ರಾಧಿಕಾರದ ಸದಸ್ಯರಾಗಿರುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸುಸಜ್ಜಿತ ವೇದಿಕೆ ಸಜ್ಜುಗೊಳ್ಳಲಿದೆ. ಮಳೆಗಾಲದಲ್ಲಿ ರಕ್ಷಣೆ ಮತ್ತು ಆರತಿ ಕಾರ್ಯಕ್ಕೆ ಅನುಕೂಲ ಆಗುವಂತೆ ಚಾವಣಿ ವ್ಯವಸ್ಥೆ ರೂಪಿಸಲಾಗುತ್ತದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಾರೆ.
‘ಕೆಆರ್‌ಎಸ್ ಬೃಂದಾವನಕ್ಕೆ ದೇಶ ವಿದೇಶಗಳಿಂದ ಪ್ರತಿ ದಿನ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ಮತ್ತು ಬೃಂದಾವನಕ್ಕೆ ಇನ್ನಷ್ಟು ಮೆರಗು ನೀಡುವ ಉದ್ದೇಶದಿಂದ ಸರ್ಕಾರ ಮಹತ್ವದ ಕಾವೇರಿ ಆರತಿ ಕಾರ್ಯಕ್ರಮವನ್ನು ರೂಪಿಸುತ್ತಿದೆ. ದಸರಾ ಹಬ್ಬದ ವೇಳೆಗೆ ಇದರ ಸಿದ್ಧತಾ ಕಾರ್ಯಗಳು ಪೂರ್ಣಗೊಳ್ಳಲಿವೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಅಕ್ಟೋಬರ್ ಮೊದಲ ವಾರ ಚಾಲನೆ ಸಿಗಲಿದೆ. ಇದರಿಂದ ಸರ್ಕಾರಕ್ಕೂ ಆದಾಯ ಬರಲಿದೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.