ADVERTISEMENT

ಶ್ರೀರಂಗಪಟ್ಟಣ: ಬೃಂದಾವನ ಉದ್ಯಾನ ಪ್ರವೇಶ ಶುಲ್ಕ ಮತ್ತೆ ಏರಿಕೆ!

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:30 IST
Last Updated 10 ಜೂನ್ 2025, 15:30 IST
ಕೃಷ್ಣರಾಜಸಾಗರ ಅಣೆಕಟ್ಟೆಯ ಬಳಿಯ ವಿಶ್ವಪ್ರಸಿದ್ಧ ಬೃಂದಾವನ ಉದ್ಯಾನ 
ಕೃಷ್ಣರಾಜಸಾಗರ ಅಣೆಕಟ್ಟೆಯ ಬಳಿಯ ವಿಶ್ವಪ್ರಸಿದ್ಧ ಬೃಂದಾವನ ಉದ್ಯಾನ    

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯ ವಿಶ್ವವಿಖ್ಯಾತ ‘ಬೃಂದಾವನ’ ಉದ್ಯಾನದ ಪ್ರವೇಶ ಶುಲ್ಕವನ್ನು ಜೂನ್‌ 1ರಿಂದ ಮತ್ತೆ ಏರಿಕೆ ಮಾಡಲಾಗಿದ್ದು, ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. 

ಕಾವೇರಿ ನೀರಾವರಿ ನಿಗಮದಿಂದ ಬೃಂದಾವನ ಪ್ರವೇಶದ್ವಾರದ ಶುಲ್ಕ, ವಾಹನ ಪಾರ್ಕಿಂಗ್‌ ಹಾಗೂ ಬೃಂದಾವನ ಮುಖ್ಯರಸ್ತೆ ಮೇಲ್ಸೇತುವೆ ಟೋಲ್‌ ಮೇ 1ರಿಂದ 2 ಪಟ್ಟು ಹೆಚ್ಚಿಸಲಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮೇ 2ರಂದು ವಿಶೇಷ ವರದಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ರೈತಸಂಘದವರು ಪ್ರತಿಭಟಿಸಿದ ಪರಿಣಾಮ ಶುಲ್ಕ ಇಳಿಸಲಾಗಿತ್ತು.

6 ವರ್ಷ ಮೇಲಿನವರಿಗೆ ₹50ರಿಂದ ₹100, 3ರಿಂದ 6 ವರ್ಷದವರಿಗೆ ₹10ರಿಂದ ₹50ಕ್ಕೆ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದೆ.

ADVERTISEMENT

ಪಾರ್ಕಿಂಗ್‌ ಶುಲ್ಕವನ್ನು ದ್ವಿಚಕ್ರವಾಹನಕ್ಕೆ ₹10ರಿಂದ ₹20, ತ್ರಿಚಕ್ರ ವಾಹನಕ್ಕೆ ₹20ರಿಂದ ₹50, ನಾಲ್ಕು ಚಕ್ರಗಳ (ಕಾರು, ಜೀಪು) ವಾಹನಗಳಿಗೆ ₹50ರಿಂದ ₹100, ಟೆಂಪೊ ಟ್ರಾವಲರ್‌ ಮತ್ತು ಮಿನಿ ಬಸ್‌ಗಳಿಗೆ ₹70ರಿಂದ ₹100 ಹಾಗೂ ಬಸ್‌ಗಳಿಗೆ ₹100ರಿಂದ ₹200ಕ್ಕೆ ಹೆಚ್ಚಿಸಲಾಗಿದೆ.

‘ಬೃಂದಾವನ ಮೇಲ್ಸೇತುವೆ ಟೋಲ್‌ ಅಕ್ರಮವಾಗಿ ವಸೂಲಿ ಮಾಡಲಾಗುತ್ತಿದೆ’ ಎಂಬ ರೈತಸಂಘದ ಆರೋಪದ ನಡುವೆಯೂ ಮತ್ತೆ ಟೋಲ್‌ ಶುಲ್ಕ ಸಂಗ್ರಹಿಸಲಾಗುತ್ತಿದೆ. ಕಾರ್‌, ಜೀಪ್‌ಗಳಿಗೆ ₹50ರಿಂದ ₹100ಕ್ಕೆ ಟೋಲ್‌ ಶುಲ್ಕ ಹೆಚ್ಚಳ ಮಾಡಲಾಗಿದೆ. 

‘ದರ ಇಳಿಕೆ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಹೊಸ ಟೆಂಡರ್‌ ನಿಯಮದ ಪ್ರಕಾರ ಶುಲ್ಕ ಏರಿಸಲಾಗಿದೆ. ಬೃಂದಾವನ ಉದ್ಯಾನ ನಿರ್ವಹಣೆ ಕಾರ್ಮಿಕರ ವೇತನ ಮತ್ತು ವಿದ್ಯುತ್‌ ಶುಲ್ಕ ಭರಿಸಲು ಈ ಕ್ರಮ ಅನಿವಾರ್ಯ’ ಎಂದು ಕಾವೇರಿ ನೀರಾವರಿ ನಿಗಮದ ಎಸ್‌ಇ ರಘುರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.