ADVERTISEMENT

ನಾಳೆ ಕೆಆರ್‌ಎಸ್‌ ಜಲಾಶಯಕ್ಕೆ ಸಿಎಂ ಬಾಗಿನ: ಕಪ್ಪು ಬಾವುಟ ಪ್ರದರ್ಶಿಸಲು ನಿರ್ಧಾರ

ಸೂತಕದ ಹಬ್ಬ ಆಚರಣೆ ಸರಿಯೇ?

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 13:35 IST
Last Updated 19 ಆಗಸ್ಟ್ 2020, 13:35 IST

ಮಂಡ್ಯ: ಆ.21ರಂದು ನಡೆಯಲಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೆಆರ್‌ಎಸ್‌ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಲು ನಿರ್ಧರಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ‘ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಕಷ್ಟದಿಂದ ಜನರು ತತ್ತರಿಸಿ ಹೋಗಿದ್ದಾರೆ. ಅತಿವೃಷ್ಠಿಯಿಂದ ಸಾಕಷ್ಟು ಸಾವು ನೋವುಗಳಾಗಿವೆ. ಕಳೆದ ವರ್ಷದ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡಿಲ್ಲ. ಆದರೂ ಆ.21 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೆಆರ್‌ಎಸ್‌, ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಂದಾಗಿದ್ದಾರೆ’ ಎಂದು ಹೇಳಿದರು.

’ಉತ್ತರ ಕರ್ನಾಟಕದ ಭಾಗದಲ್ಲಿ ಊರುಗಳು ಜಲಾವೃತ ಆಗಿ ಜನರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಬೆಳೆಗಳು ಜಲಾವೃತ ಆಗಿ ರೈತರಿಗೆ ದಿಕ್ಕೇ ತೋಚದಂತಾಗಿದೆ. ಈ ಪರಿಸ್ಥಿತಿಯಲ್ಲಿ ಬಾಗಿನ ಅರ್ಪಿಸುವುದು ಸೂತಕದ ಮನೆಯಲ್ಲಿ ಅದ್ದೂರಿ ಹಬ್ಬ ಆಚರಿಸಿದಂತೆ ಆಗುತ್ತದೆ. ಮುಖ್ಯಮಂತ್ರಿಗೆ ಸೂಕ್ಷ್ಮಪ್ರಜ್ಞೆ ಇದ್ದರೆ ಬಾಗಿನ ಅರ್ಪಣೆ ಕಾರ್ಯಕ್ರಮ ರದ್ದುಪಡಿಸಿ ಸಂಕಷ್ಟದಲ್ಲಿರುವ ರೈತರು, ಜನರ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಹಸಿರು ಸೇನೆ ಹಾಗೂ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಸ್ವರಾಜ್ ಇಂಡಿಯಾ ಪಕ್ಷ, ಜನಾಂದೋಲನಾ ಮಹಾಮೈತ್ರಿ ಸಂಘಟನೆ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಕಪ್ಪು ಬಾವುಟ ಪ್ರದರ್ಶಿಸಲಿದ್ದಾರೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಲಾಗುವುದು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಲಾಗುವುದು. ಕಬಿನಿ ಜಲಾಶಯದಲ್ಲಿ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಅಲ್ಲಿಯೂ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು’ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿ ಇದ್ದಾಗಲೇ ಒಂದು ರೀತಿ, ಆಡಳಿತ ಪಕ್ಷದಲ್ಲಿ ಮತ್ತೊಂದು ರೀತಿ ನಡೆದುಕೊಳ್ಳುತ್ತಿದ್ದಾರೆ. ಅಕ್ರಮ ಕಲ್ಲುಗಣಿಗಾರಿಕೆ ನಿಷೇಧಿಸಲಾಗುವುದು ಎಂಬು ಅವರು ಕೊಟ್ಟಿದ್ದ ಮಾತಿಗೆ ಬದ್ಧರಾಗಿಲ್ಲ. ಕಲ್ಲು ಗಣಿಗಾರಿಕೆ ನಿಲ್ಲಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

‘ಜಲಾಶಯಗಳಿಗೆ ಬಾಗಿನ ಅರ್ಪಿಸುವ ಖುಷಿಯನ್ನು ಅನುಭವಿಸುವ ಸ್ಥಿತಿಯಲ್ಲಿ ರಾಜ್ಯದ ಜನತೆ ಇಲ್ಲ. ಸೂತಕದ ಮನೆಯಲ್ಲಿ ಸಂಭ್ರಮಾಚರಣೆ ಮಾಡುವುದು ಸರಿಯಲ್ಲ. ಇದನ್ನು ಬಿಟ್ಟು ಕಷ್ಟದಲ್ಲಿ ಇರುವ ಜನರ ನೆರವಿಗೆ ಧಾವಿಸಬೇಕು’ ಎಂದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಶಂಕರ್‌, ಮುಖಂಡರಾದ ಲಿಂಗಪ್ಪಾಜಿ, ರಾಮಕೃಷ್ಣಯ್ಯ, ಶೆಟ್ಟಹಳ್ಳಿ ರವಿಕುಮಾರ್, ಎಂ.ಎಸ್.ವಿಜಯ್‍ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.