ADVERTISEMENT

‘ಮರಾಠಾ ಅಭಿವೃದ್ಧಿ ನಿಗಮ ರದ್ದುಪಡಿಸಿ’

ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 16:57 IST
Last Updated 9 ಡಿಸೆಂಬರ್ 2020, 16:57 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಕದಂಬ ಸೈನ್ಯ ಕನ್ನಡ ಸಂಘಟನೆ, ಜಾತ್ಯತೀತ ಮಹಿಳಾ ರಕ್ಷಣಾ ವೇದಿಕೆ ರಾಜ್ಯ ಘಟಕದ ಸದಸ್ಯರು ಪ್ರತಿಭಟಿಸಿದರು
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಕದಂಬ ಸೈನ್ಯ ಕನ್ನಡ ಸಂಘಟನೆ, ಜಾತ್ಯತೀತ ಮಹಿಳಾ ರಕ್ಷಣಾ ವೇದಿಕೆ ರಾಜ್ಯ ಘಟಕದ ಸದಸ್ಯರು ಪ್ರತಿಭಟಿಸಿದರು   

ಮಂಡ್ಯ: ಮರಾಠಾ ಅಭಿವೃದ್ಧಿ ನಿಗಮ ರಚನೆ ಆದೇಶವನ್ನು ಕೂಡಲೇ ವಾಪಸ್‌ ಪಡೆಯಬೇಕು, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್‌ ತಮಿಳು ಅಭಿವೃದ್ಧಿ ಪ್ರಾಧಿಕಾರ ರಚಿಸುತ್ತೇವೆ ಎಂಬ ಹೇಳಿಕೆ ಖಂಡಿಸಿ ಕದಂಬ ಸೈನ್ಯ ಕನ್ನಡ ಸಂಘಟನೆ, ಜಾತ್ಯತೀತ ಮಹಿಳಾ ರಕ್ಷಣಾ ವೇದಿಕೆ ರಾಜ್ಯ ಘಟಕದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಉಪ ಚುನಾವಣೆಯಲ್ಲಿ ಮತ ಪಡೆ ಯುವ ಸಲುವಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ಮರಾಠಿಗರ ಮತ ಬೇಕು, ಕನ್ನಡಿಗರ ಮತ ಬೇಕೆ ಬೇಡವೇ ಎಂಬುದನ್ನು ಸ್ಪಷ್ಟಪಡಿಸಬೇಕು. ರಾಜ್ಯದಲ್ಲಿ ಯಾವ ಸುಳಿವೂ ನೀಡದೆ ಮರಾಠ ಅಭಿವೃದ್ಧಿ ನಿಗಮ ರಚಿಸುವ ಮೂಲಕ ಕನ್ನಡಿಗರಾಗಿದ್ದ ಮರಾಠಿಗರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಗೊಳಿಸುವ ಹುನ್ನಾರ ನಡೆಸು ತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ಅನ್ಯ ಭಾಷೆಗಳ ಹಾವಳಿಯಿಂದ ಕರ್ನಾಟಕದಲ್ಲಿ ಕನ್ನಡಿಗರೇ ಅನಾಥ ರಾಗುವ ಸ್ಥಿತಿ ತಲುಪಿದ್ದೇವೆ. ಉತ್ತರ ಕರ್ನಾಟಕ ದಲ್ಲಿ ಕಳೆದ ವರ್ಷ ನೆರೆ ಬಂದಾಗ ಪ್ರವಾಹದಿಂದ ಬದುಕು ಕಳೆದು ಕೊಂಡ ವರ ನೆರವಿಗೆ ಬಂದಿರಲಿಲ್ಲ ಎಂದರು.

ಅಲ್ಲದೆ ಡಿಸಿಎಂ ಅಶ್ವತ್ಥನಾರಾಯಣ ಅವರು ತಮಿಳು ಅಭಿವೃದ್ಧಿ ಪ್ರಾಧಿಕಾರ ರಚಿಸುವ ಹೇಳಿಕೆ ನೀಡಿದ್ದಾರೆ. ತೆಲಗು, ಮಲಯಾಳಂ ಮತ್ತು ಹಿಂದಿ ಭಾಷಿಗರು ಮನವಿ ಮಾಡಿದರೆ ಪ್ರಾಧಿಕಾರ ರಚಿಸು ತ್ತೇವೆ ಎಂದು ಹೇಳುವ ಮೂಲಕ ಪರ ಭಾಷಿಕರ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮೂರು ದಶಕದಿಂದ ಹೋರಾಟ ನಡೆಸುತ್ತಿದ್ದರೂ ಅದನ್ನು ಇದುವರೆಗೂ ಜಾರಿ ಮಾಡಿಲ್ಲ. 2017ರಲ್ಲಿ ಮಹಿಷಿ ವರದಿ ಪರಿಷ್ಕೃತ ವರದಿ ಸರ್ಕಾರಕ್ಕೆ ಸಲ್ಲಿಸಿದ್ದರೂ ಯಾವುದೇ ಸದನದಲ್ಲಿ ಮಂಡಿಸಿ ಕಾಯ್ದೆಯಾಗಿ ಜಾರಿಗೆ ತಂದಿಲ್ಲ. ಆಳುವವರು ತಮ್ಮ ಅನುಕೂಲಕ್ಕೆ ತಕ್ಕ ನೀತಿ ಅನುಸರಿಸಿ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕದಂಬ ಸೈನ್ಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್‌, ಮಹಿಳಾ ರಕ್ಷಣಾ ವೇದಿಕೆ ರಾಜ್ಯ ಘಟಕದ ಉಪಾಧ್ಯಕ್ಷೆ ಪಾರ್ವತಮ್ಮ, ಪದ್ಮ, ಜಯಲಕ್ಷ್ಮಿ, ಲಾವಣ್ಯ, ಜಯಂತಿ, ಎ.ನಾಗೇಂದ್ರ, ಎನ್‌.ವೆಂಕಟೇಶ್‌, ಭಗವಾನ್‌, ಉಮ್ಮಡಹಳ್ಳಿ ನಾಗೇಶ್‌, ಯೋಗೇಶ್‌, ಲೋಕೇಶ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.