ADVERTISEMENT

ಕೊತ್ತತ್ತಿ: ರಾಸುಗಳ ಸರಣಿ ಸಾವು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 5:42 IST
Last Updated 27 ಸೆಪ್ಟೆಂಬರ್ 2021, 5:42 IST
ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಸು ಮೃತಪಟ್ಟಿರುವುದು
ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಸು ಮೃತಪಟ್ಟಿರುವುದು   

ಮಂಡ್ಯ: ತಾಲ್ಲೂಕಿನ ಕೊತ್ತತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದನ, ಕರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ಮರಣ ಹೊಂದುತ್ತಿರುವ ರಾಸುಗಳಿಂದ ಅಕ್ಕಪಕ್ಕದ ಗ್ರಾಮದ ರೈತರು ಭಯ ಭೀತರಾಗಿದ್ದಾರೆ.

ಹಲವು ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿಂದ 20ಕ್ಕೂ ಹೆಚ್ಚು ರಾಸುಗಳು ಸಾವಿಗೀಡಾಗಿವೆ. ಕೊತ್ತತ್ತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪಶು ಇಲಾಖೆಯಿದ್ದು, ಪಶುವೈದ್ಯರೇ ಕೆಲಸ ನಿರ್ವಹಿಸುತ್ತಿಲ್ಲ. ಇಲಾಖೆಯಲ್ಲಿ ಪಶುವೈದ್ಯರು ಇದ್ದಾರೋ ಅಥವಾ ನಿಯೋಜನೆಗೊಂಡಿಲ್ಲವೋ ಎಂಬ ಆತಂಕ ಒಂದು ವರ್ಷದಿಂದಲೂ ಇದೆ ಎಂದು ಮೊತ್ತಹಳ್ಳಿ ಗ್ರಾಮದ ಹಸು ಕಳೆದುಕೊಂಡ ರೈತ ಸಚಿನ್‌ಆರೋಪಿಸುತ್ತಾರೆ.

ಕೊತ್ತತ್ತಿ, ಲಾಳನಕೆರೆ ಹಾಗೂ ಮೊತ್ತಹಳ್ಳಿ ಗ್ರಾಮದಲ್ಲಿ ಕಾಲುಬಾಯಿ ಜ್ವರ ಉಲ್ಬಣವಾಗಿದ್ದರೂ ಯಾವುದೇ ಅಧಿಕಾರಿಗಳು ಬಂದಿಲ್ಲ. ಪ್ರತಿದಿನ ಒಂದಲ್ಲ ಒಂದು ಜಾನುವಾರುಗಳು ಮೃತಪಡುತ್ತಿವೆ. ಈ ಭಾಗದ ಪಶು ವೈದ್ಯ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಇರುವುದು, ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕದಿರುವುದು ರೋಗ ಉಲ್ಬಣವಾಗಲು ಕಾರಣ ಎಂದು ಗ್ರಾಮಸ್ಥರು ದೂರುತ್ತಾರೆ.

ADVERTISEMENT

ಇಲಾಖೆ ಅಧಿಕಾರಿಗಳು ರಾಸುಗಳಿಗೆ ಲಸಿಕೆ ಹಾಕಿಸಬೇಕು. ಜೊತೆಗೆ ಪಶು ವೈದ್ಯರು ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿನ ಹೈನುಗಾರರ ಸಮಸ್ಯೆ ಆಲಿಸಬೇಕು. ಇಲ್ಲದಿದ್ದರೆ ಪ್ರತಿ ಭಟನೆ ನಡೆಸಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.