ಕೆಆರ್‌ಎಸ್
- ಪ್ರಜಾವಾಣಿ ಚಿತ್ರ
ಮಂಡ್ಯ: ಕೆಆರ್‌ಎಸ್ ಬಳಿ ಕಾವೇರಿ ಆರತಿ ಮಾಡುವುದು ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನಲೆಯಲ್ಲಿ ರೈತ ಸಂಘ, ಕರುನಾಡ ಸೇವಕರು ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಸಿಹಿ ಹಂಚಿ ಶುಕ್ರವಾರ ಸಂಭ್ರಮಿಸಿದರು.
ನ್ಯಾಯಾಲಯದಿಂದ ತಡೆಯಾಜ್ಞೆ ವಿಷಯ ಹೊರಬರುತ್ತಿದ್ದಂತೆ ಇತ್ತ ನಗರದ ಜೆ.ಸಿ.ವೃತ್ತದ ಬಳಿ ಜಮಾವಣೆಗೊಂಡ ವಿವಿಧ ಸಂಘಟನೆಯ ಕಾರ್ಯಕರ್ತರು ರೈತರ ಪರವಾದ ಘೋಷಣೆ ಕೂಗಿದರು.
ರೈತ ಸಂಘದ ಮುಖಂಡ ಸೊ.ಶಿ.ಪ್ರಕಾಶ್ ಮಾತನಾಡಿ, ರಾಜ್ಯ ಸರ್ಕಾರದ ಹಟಮಾರಿತನದಿಂದ ಕಾವೇರಿ ಆರತಿ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ತರಲು ಹೊರಟಿತ್ತು. ಹೈಕೋರ್ಟ್ ತಡೆಯಾಜ್ಞೆ ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಪರಿಸರದ ಪಾಠ ಹೇಳಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಕಾವೇರಿ ಆರತಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡುವ ಮೂಲಕ ಹೈಕೋರ್ಟ್ ರೈತರ ದನಿಯಾಗಿದೆ ಹಾಗಾಗಿ ರಾಜ್ಯ ಸರ್ಕಾರ ಕೂಡಲೆ ಬೇಷರತ್ತಾಗಿ ಯೋಜನೆಯನ್ನು ಹಿಂಪಡೆಯಬೇಕು. ಜೊತೆಗೆ ರೈತರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶಿವಳ್ಳಿ ಚಂದ್ರು, ಎಚ್.ಡಿ.ಜಯರಾಂ, ಸಂತೋಷ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.