ADVERTISEMENT

ಶ್ರೀರಂಗಪಟ್ಟಣ: ವೆಲ್ಲೆಸ್ಲಿ ಸೇತುವೆ ಮೇಲೆ ಸಂಚಾರ ನಿಷೇಧ

ಕೆಆರ್‌ಎಸ್‌ ಅಣೆಕಟ್ಟೆಯಿಂದ 1.01 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:31 IST
Last Updated 19 ಆಗಸ್ಟ್ 2025, 2:31 IST
ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮೇಲೆ ‌ಸಂಚಾರ ನಿಷೇಧಿಸಿದ್ದು, ಸೇತುವೆಯ ಎರಡೂ ದ್ವಾರಗಳನ್ನು ಸೋಮವಾರ ಬಂದ್‌ ಮಾಡಿರುವುದು
ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮೇಲೆ ‌ಸಂಚಾರ ನಿಷೇಧಿಸಿದ್ದು, ಸೇತುವೆಯ ಎರಡೂ ದ್ವಾರಗಳನ್ನು ಸೋಮವಾರ ಬಂದ್‌ ಮಾಡಿರುವುದು   

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ಸೋಮವಾರ 1.01 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆಯ ತಳಕ್ಕೆ ನೀರು ತಾಕುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆ ಮೇಲೆ ವಾಹನ ಮತ್ತು ಜನ ಸಂಚಾರ ನಿಷೇಧಿಸಲಾಗಿದೆ. ಸೇತುವೆಯ ಎರಡೂ ದ್ವಾರಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ.

ಸೇತುವೆ ಬಳಿಯ ಆಂಜನೇಯಸ್ವಾಮಿ ದೇವಾಲಯ ಅರ್ಧದಷ್ಟು ಜಲಾವೃತವಾಗಿದೆ. ಗಂಜಾಂನ ನಿಮಿಷಾಂಬ ದೇವಾಲಯ ಮತ್ತು ಕಾವೇರಿ ಸಂಗಮದ ಬಳಿ ನದಿ ತೀರದ ಮೆಟ್ಟಿಲುಗಳು ಮುಳುಗಿವೆ. 

ADVERTISEMENT

ನಡುಗಡ್ಡೆಯಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ:

ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಪಟ್ಟಣದ ಬಳಿ ನಡುಗಡ್ಡೆಯಲ್ಲಿ ಸಿಲುಕಿದ್ದ ಉತ್ತರಪ್ರದೇಶದ ವ್ಯಕ್ತಿಯೊಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ಸೋಮವಾರ ರಕ್ಷಿಸಿದರು. ಪಟ್ಟಣದ ಒಬೆಲಿಸ್ಕ್‌ ಸ್ಮಾರಕ ಸಮೀಪ ನದಿಯ ಎರಡು ಸೀಳುಗಳ ನಡುವೆ ಉತ್ತರ ಪ್ರದೇಶದ ಲಕ್ಷ್ಮಣ್‌ ಸಿಲುಕಿದ್ದರು. ಅಗ್ನಿಶಾಮಕ ಸಿಬ್ಬಂದಿ ಮೋಟರ್‌ ಚಾಲಿತ ಫೈಬರ್‌ ಬೋಟ್‌ ಬಳಿಸಿ ಲಕ್ಷ್ಮಣ್‌ ಅವರನ್ನು ರಕ್ಷಿಸಿದರು.

ಗೇಟ್‌ ಟು ಡೆಲ್ಲಿ ಸ್ಮಾರಕದ ಕಂದಕದ ಮೂಲಕ ಬೋಟ್‌ ಜತೆ ನದಿಗೆ ಇಳಿದ ಅಗ್ನಿಶಾಮಕ ಠಾಣಾಧಿಕಾರಿ ಅಂಬರೀಶ್ ಉಪ್ಪಾರ್‌ ಸಿಬ್ಬಂದಿಗಳಾದ ಪರಮೇಶ್ ತೇಜಮೂರ್ತಿ ಚಂದ್ರಶೇಖರ ವಿಶ್ವಾಸ್‌ ನೂರ್‌ಸಾಬ್‌ ಅವರ ತಂಡ ಕಾರ್ಯಾಚರಣೆ ನಡೆಸಿತು. ‘ನದಿಯ ನೀರಿನ ಮಟ್ಟ ಇನ್ನು ಎರಡು ಅಡಿ ಹೆಚ್ಚಾಗಿದ್ದರೂ ಲಕ್ಷ್ಮಣ್‌ ಕೊಚ್ಚಿಕೊಂಡು ಹೋಗುತ್ತಿದ್ದರು. ಅವರನ್ನು ರಕ್ಷಿಸಿ ಪೊಲೀಸರ ವಶಕ್ಕೆ ನೀಡಲಾಗಿದೆ. ಲಕ್ಷ್ಮಣ್‌ ಮಾನಸಿಕ ಅಸ್ವಸ್ಥರಂತೆ ಕಾಣುತ್ತಿದ್ದಾರೆ’ ಎಂದು ಅಂಬರೀಶ್ ಉಪ್ಪಾರ್‌ ಹೇಳಿದರು. ‘ಲಕ್ಷ್ಮಣ್‌ ಉತ್ತರಪ್ರದೇಶದವರು. ಕೆಲಸ ಹುಡುಕಿಕೊಂಡು ಮಹಾರಾಷ್ಟ್ರಕ್ಕೆ ಬಂದಿದ್ದು ಅಲ್ಲಿಂದ ಮೂರು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದಾರೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪಟ್ಟಣ ಠಾಣೆ ಸಿಪಿಐ ಬಿ.ಜಿ. ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.