ಮದ್ದೂರು: ತಾಲ್ಲೂಕಿನ ವೈದ್ಯನಾಥಪುರದ ಬಳಿಯಿರುವ ಆಲೂರು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ಚಾಮುಂಡೇಶ್ವರಿ ಜಯಂತ್ಯುತ್ಸವ ಅದ್ದೂರಿಯಿಂದ ಜರುಗಿತು.
ಜಯಂತ್ಯುತ್ಸವದ ಅಂಗವಾಗಿ ಮುಂಜಾನೆಯಿಂದಲೇ ದೇವಿಯ ವಿಗ್ರಹಕ್ಕೆ ಅಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ದೇವಸ್ಥಾನ ಗರ್ಭಗುಡಿ, ದೇವಿಯವರ ವಿಗ್ರಹ ಹಾಗೂ ಪ್ರಾoಗಣಕ್ಕೆ ಹೂವಿನಿಂದ ಅಲಂಕರಿಸಲಾಗಿತ್ತು, ಪ್ರಧಾನ ಅರ್ಚಕ ಗಿರೀಶ್ ಪೂಜಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ನಂತರ ಮಧ್ಯಾಹ್ನ 1ರಿಂದ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಗ್ರಾಮದ, ಮದ್ದೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನರು ದೇವಿಯ ದರ್ಶನ ಪಡೆದರು.
ಗ್ರಾಮದ ಮುಖಂಡ ಉದಯ್ ಶಂಕರ್ ಮಾತನಾಡಿ, ‘ಪ್ರತಿ ವರ್ಷವೂ ದೇವಸ್ಥಾನದಲ್ಲಿ ಅಮ್ಮನವರ ಜಯಂತ್ಯುತ್ಸವದ ಅಂಗವಾಗಿ ಹಲವು ಪೂಜಾ ಕಾರ್ಯಕ್ರಮಗಳು, ಅನ್ನಸಂತರ್ಪಣೆಯನ್ನು ಗ್ರಾಮದ ಹಿರಿಯರು, ಮುಖಂಡರು, ಯುವಕರು ಸೇರಿದಂತೆ ಎಲ್ಲಾ ಗ್ರಾಮಸ್ಥರ ಸಹಕಾರದಿಂದ ನಡೆಸಿಕೊಂಡು ಬರುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.