ADVERTISEMENT

ಮೇಲುಕೋಟೆ ಚೆಲುವನಾರಾಯಣ ಸ್ಚಾಮಿಗೆ ಬಂಗಾರ ಕವಚದ ಅಲಂಕಾರ

ಮೇಲುಕೋಟೆ: ಮುಕ್ಕೋಟಿ ದ್ವಾದಶಿ ಪ್ರಯುಕ್ತ ದೇವರ ದರ್ಶನ ಪಡೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:12 IST
Last Updated 1 ಜನವರಿ 2026, 7:12 IST
ಯೋಗಾನರಸಿಂಹ ಸ್ವಾಮಿಗೆ ದ್ವಾದಶಿಯದಂದು ವಿಶೇಷ ಅಲಂಕಾರ ಮಾಡಲಾಗಿತ್ತು
ಯೋಗಾನರಸಿಂಹ ಸ್ವಾಮಿಗೆ ದ್ವಾದಶಿಯದಂದು ವಿಶೇಷ ಅಲಂಕಾರ ಮಾಡಲಾಗಿತ್ತು   

ಮೇಲುಕೋಟೆ: ಭೂವೈಕುಂಠ ಎಂದೇ ಪ್ರಖ್ಯಾತಿಗೊಂಡಿರುವ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಸ್ವಾಮಿಗೆ ಬಂಗಾರದ ಕವಚದ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಇಲ್ಲಿನ ದೇವಾಲಯದಲ್ಲಿ ಮುಂಜಾನೆ 5ರಿಂದಲೇ ಸುಪ್ರಭಾತ, ವಿಶ್ವರೂಪ, ಸಹಸ್ರ ನಾಮ ಪೂಜಾ ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು. ಗೋಷ್ಠಿಯೊಂದಿಗೆ ಪಾರಾಯಣ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ಧನುರ್ಮಾಸದ ಪೂಜೆಯಲ್ಲೂ ನೂರಾರು ಭಕ್ತರು ಪಾಲ್ಗೊಂಡಿದ್ದರು‌. ಭಕ್ತರಿಗೆ ಪೊಂಗಲ್, ಲಾಡು ಪ್ರಸಾದ ವಿತರಣೆ ಮಾಡಲಾಯಿತು.

ಬಂಗಾರದ ಕವಚ ಕೊಡುಗೆ:

ADVERTISEMENT

ಮೈಸೂರು ಅರಸರ ಮನೆತನದ ಕುಲದೇವರಾದ ಚೆಲುವ ನಾರಾಯಣ ಸ್ವಾಮಿಗೆ ಅರಸರ ಮನೆತನದಿಂದ ದ್ವಾದಶಿ ದಿನದಂದು ಬಂಗಾರದ ಕವಚ ಕೊಡುಗೆಯಾಗಿ ನೀಡಲಾಗಿತ್ತು. ಆಗಿನಿಂದಲು ದೇವಾಲಯದ ಮೂಲ‌ ಮೂರ್ತಿ ತಿರುನಾರಾಯಣ ಸ್ವಾಮಿಗೆ ಅರಸರು ನೀಡಿದ ಬಂಗಾರದ ಕವಚದ ಅಲಂಕಾರ ಮಾಡಲಾಗುತ್ತಿದೆ. ಈ ಅಲಂಕಾರ ವನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಕಣ್ಮುಂಬಿಕೊಂಡರು. ಮಂಗಳವಾರ ವೈಕುಂಠ ಏಕಾದಶಿಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮೇಲುಕೋಟೆಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಮೇಲುಕೋಟೆಯಲ್ಲಿ ಏಕಾದಶಿಗಿಂತ ದ್ವಾದಶಿ ಆಚರಣೆ ಬಹಳ ವಿಶೇಷ ಪಡೆದಿದ್ದು, ದ್ವಾದಶಿ ದಿನ ದೇವರ ದರ್ಶನ ಪಡೆಯುವುದು ಬಹು ವರ್ಷಗಳ ಪುಣ್ಯ ಪ್ರಾಪ್ತಿಯಾಗುತ್ತದೆ. ಜತೆಗೆ ಇಷ್ಟಾರ್ಥ ಲಭಿಸಲಿದೆ. ದ್ವಾದಶಿಯಂದು‌ ಇಲ್ಲಿನ ದೇವಾಲಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಚೆಲುವನಾರಾಯಣ ಹಾಗೂ ಯಧುಗಿರಿ ನಾಯಕಿ, ಶ್ರೀಮಾನ್ ರಾಮಾನುಜಾಚಾರ್ಯರ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆಯುತ್ತಾರೆ ಎಂದು ದೇವಾಲಯ ಕೈಂಕರ್ಯಪರ ವಿದ್ವಾನ್ ರಾಮಪ್ರಿಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.