ADVERTISEMENT

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಭೇಟಿ

ಬಳೇಅತ್ತಿಗುಪ್ಪೆ ಗ್ರಾಮದಲ್ಲಿ ನಡೆದಿದ್ದ ಮಕ್ಕಳ ಸಾವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 4:47 IST
Last Updated 10 ಏಪ್ರಿಲ್ 2021, 4:47 IST
ಪಾಂಡವಪುರ ತಾಲ್ಲೂಕಿ ಬಳೇಅತ್ತಿಗುಪ್ಪೆ ಗ್ರಾಮದಲ್ಲಿ ಮೂವರು ಮಕ್ಕಳನ್ನು ಕಳೆದುಕೊಂಡ ಪೋಷಕರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು
ಪಾಂಡವಪುರ ತಾಲ್ಲೂಕಿ ಬಳೇಅತ್ತಿಗುಪ್ಪೆ ಗ್ರಾಮದಲ್ಲಿ ಮೂವರು ಮಕ್ಕಳನ್ನು ಕಳೆದುಕೊಂಡ ಪೋಷಕರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು   

ಪಾಂಡವಪುರ: ತಾಲ್ಲೂಕಿನ ಬಳೇಅತ್ತಿಗುಪ್ಪೆ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಮೂವರು ಮಕ್ಕಳ ಕುಟುಂಬವನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರು ಸಾಂತ್ವನ ಹೇಳಿದರು.

ಆಯೋಗದ ಸದಸ್ಯರಾದ ಎಮ್‌.ಎಲ್.ಪರಶುರಾಮ್, ಎಚ್‌.ಸಿ.ರಾಘವೇಂದ್ರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ನಂತರ ಹಿರೇಮರಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಆಯೋಗದ ಸದಸ್ಯ ಎಚ್.ಎಲ್.ಪರಶುರಾಮ್ ಮಾತನಾಡಿ, 2021ರ ಫೆಬ್ರುವರಿ 16ರಂದು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೃಷಿ ಹೊಂಡಗಳಿಗೆ ರಕ್ಷಣೆಯ ವ್ಯವಸ್ಥೆ
ಮತ್ತು ಮಕ್ಕಳು ಬೀಳದ ಹಾಗೆ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿತ್ತು. ಆದರೂ ಈ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಬಳೇ ಅತ್ತಿಗುಪ್ಪೆ ಮಕ್ಕಳ ಪ್ರಕರಣ ವನ್ನು ಆಯೋಗವು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಕ್ಕಳ ಸಾವು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಎನ್‌ಆರ್‌ಇಜಿ ಯೋಜನೆಯಡಿಯಲ್ಲಿ ಕೈಗೊಂಡ ಕೃಷಿ ಹೊಂಡಗಳಿಗೆ ಮಕ್ಕಳು ಬೀಳದಂತೆ ಸುರಕ್ಷಿತ ಕ್ರಮಕೈಗೊಳ್ಳಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈಗಾಗಲೇ ಸ್ಥಾಪಿತ ಕೃಷಿ ಹೊಂಡಕ್ಕೆ ತಡೆಗೋಡೆ ಅಥವಾ ಸುರಕ್ಷಿತ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಸಂತ್ರಸ್ತ ಕುಟುಂಬಸ್ಥರಿಗೆ ಶೀಘ್ರವಾಗಿ ಪರಿಹಾರವನ್ನೂ ವಿತರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸಲಹೆ ಮತ್ತು ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಇಒ ಆರ್.ಪಿ.ಮಹೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಸೌಮ್ಯ, ಸಿಡಿಪಿಒ ನಟರಾಜು, ಪಿಎಸ್‌ಐ ಪೂಜಾ ಕುಂಟೋಜಿರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.