ADVERTISEMENT

ಹೆಮ್ಮನಹಳ್ಳಿ: ಚೌಡೇಶ್ವರಿ ಜಾತ್ರೋತ್ಸವ ಆರಂಭ

36 ಗಂಟೆ ಮಾತ್ರ ದೇವಿಯ ದರ್ಶನ, ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಎಂ.ಆರ್.ಅಶೋಕ್ ಕುಮಾರ್
Published 13 ಮಾರ್ಚ್ 2020, 11:19 IST
Last Updated 13 ಮಾರ್ಚ್ 2020, 11:19 IST
ಹೆಮ್ಮನಹಳ್ಳಿಯ ಚೌಡೇಶ್ವರಿ ದೇವಿಯ ವಿಗ್ರಹ
ಹೆಮ್ಮನಹಳ್ಳಿಯ ಚೌಡೇಶ್ವರಿ ದೇವಿಯ ವಿಗ್ರಹ   

ಮದ್ದೂರು: ವರ್ಷದಲ್ಲಿ ಕೇವಲ 36 ಗಂಟೆ ದರ್ಶನ ನೀಡುವ ತಾಲ್ಲೂಕಿನ ಹೆಮ್ಮನಹಳ್ಳಿಯ ಗ್ರಾಮದ ದೇವತೆ, ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಗುರುವಾರದಿಂದ ಆರಂಭಗೊಂಡಿದೆ.

ಮದ್ದೂರು– ತುಮಕೂರು ರಸ್ತೆಯಲ್ಲಿರುವ ಹೆಮ್ಮನಹಳ್ಳಿಯ ಗ್ರಾಮದಲ್ಲಿ ಜರುಗುವ ಚೌಡೇಶ್ವರಿ ಹಬ್ಬವು ಬಲು ವಿಶಿಷ್ಟವಾಗಿದೆ. ವರ್ಷವಿಡೀ ದೇವತೆಯ ಗರ್ಭಗುಡಿ ಬಾಗಿಲನ್ನು ಮಣ್ಣಿನಿಂದ ಮುಚ್ಚಲಾಗಿರುತ್ತದೆ. ಹಬ್ಬದ ದಿನ ಗರ್ಭಗುಡಿಯ ಮಣ್ಣಿನ ಬಾಗಿಲನ್ನು ತೆಗೆಯುತ್ತಾರೆ. ಹಬ್ಬ ಮುಗಿದ ನಂತರ ಸಂಪ್ರದಾಯದಂತೆ ಹುತ್ತದ ಮಣ್ಣಿಗೆ ಎಳನೀರಿನಿಂದ ಕಲಸಿ ಗರ್ಭಗುಡಿಯ ದ್ವಾರಕ್ಕೆ ಮೆತ್ತಲಾಗುತ್ತದೆ.

ಈ ಹಬ್ಬದ ಆಕರ್ಷಣೆಯೆಂದರೆ ದೇವಸ್ಥಾನದ ಸುತ್ತ ಬರುವ ಬಂಡಿ ಹಳೇ ಕಾಲದ ಕೊಂಡಬಂಡಿಯಾಗಿದೆ. ಇದು ಕೃಷ್ಣನ ರಥ ಎಂಬ ನಂಬಿಕೆ ಭಕ್ತರಲ್ಲಿದೆ. ಇಲ್ಲಿ ಕೃಷ್ಣನಿಗೂ ಚೌಡಮ್ಮನಿಗೂ ರಾಧಾ–ಕೃಷ್ಣರ ನಡುವಿನ ಸಂಬಂಧ ಎಂದೇ ಭಾವಿಸಲಾಗುತ್ತದೆ.

ADVERTISEMENT

ನಾಲ್ಕು ದಿನಗಳ ಕಾಲ ಹಬ್ಬ ನಡೆಯುತ್ತದೆ. ಆದರೆ, ದೇವರ ದರ್ಶನ 36 ಗಂಟೆ ಮಾತ್ರ. ಹಬ್ಬದ ಅಂಗವಾಗಿ ಕೊಂಡಬಂಡಿ, ಬಾಯಿಬೀಗ, ರಥೋತ್ಸವವಿದೆ. ಬೆಂಕಿಕೊಂಡ ಹಾಯಲು ಚೌಡಮ್ಮನ ಪೂಜಾರಿ, ಕತ್ತಿಹಿಡಿದ ಗುಡ್ಡ, ಪೂಜೆ ಹೊರುವವ, ಎರಡು ಹೆಬ್ಬಾರೆ ಹೊರುವ ಆರು ಜನ ಗುಡ್ಡರು ಅರ್ಹರಾಗಿದ್ದು, ನಿಷ್ಠೆಯಿಂದ ಪಾಲಿಸುತ್ತಾರೆ.

‌‘ತಿಂಗಾಳು ಮುಳಗಿದವೋ ರಂಗೋಲಿ ಬೆಳಗಿದವೋ ತಾಯಿ ಚೌಡವ್ವನ ಪೂಜೆಗೆಂದು ಬಾಳೆ ಬಾಗಿದವೋ’ ಎಂಬ ಜನಪ್ರಿಯ ಜನಪದ ಹಾಡು ಈ ಪ್ರಾಂತ್ಯದಲ್ಲಿ ಜನಜನಿತವಾಗಿದೆ. ಇಲ್ಲಿ ನೆಲೆಸಿರುವ ದೇವತೆ ಕೊಳ್ಳೇಗಾಲದ ಕಾಗಲವಾಡಿಯಿಂದ ಬಂದವಳೆಂದು ತಿಳಿದು ಬರುತ್ತದೆ.

‘ಸಂಪ್ರದಾಯದಂತೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಕಳೆದ ವರ್ಷ ಅಮೃತ ಮಣ್ಣಿನಿಂದ ಮುಚ್ಚಿರುವ ಬಾಗಿಲನ್ನು ತೆರೆಯಲಾಯಿತು. ಮಧ್ಯಾಹ್ನ 2.30ಕ್ಕೆ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಕುಣಿತ ಸೇರಿದಂತೆ ಸಂಜೆ 4ಕ್ಕೆ ಬಂಡಿ ಉತ್ಸವ ನಡೆಸಲಾಯಿತು. ರಾತ್ರಿ 11 ಗಂಟೆಗೆ ಗ್ರಾಮದ ಎಲ್ಲಾ ದೇವತೆಯರ ಕರಗ ಉತ್ಸವವು ನಡೆಯಿತು’ ಎಂದು ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಎಚ್.ಎಸ್. ಜಯಶಂಕರ್, ಅಧ್ಯಕ್ಷ ಎಚ್.ಎಸ್. ರಾಜಪ್ಪ, ಖಜಾಂಚಿ ಎಚ್.ಕೆ. ರಾಜ್ ಕುಮಾರ್ ತಿಳಿಸಿದರು.

ಮಾರ್ಚ್ 13ರಂದು ಬೆಳಿಗ್ಗೆ 4.30ಕ್ಕೆ ಚೌಡೇಶ್ವರಿ ದೇವಿಯ ಕೊಂಡೋತ್ಸವ ನಡೆಯಲಿದೆ. ಮಧ್ಯಾಹ್ನ 12ಕ್ಕೆ ರಥೋತ್ಸವವು ನಡೆಯಲಿದೆ. ಮಳವಳ್ಳಿ ತಾಲ್ಲೂಕಿನ ನೆಲ್ಲೂರು ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಬಾಯಿಬೀಗ ಸೇರಿದಂತೆ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 10ಕ್ಕೆ ಚೌಡೇಶ್ವರಿ ದೇವಿಯ ಗರ್ಭಗುಡಿಯನ್ನು ಅಮೃತ ಮಣ್ಣಿನಿಂದ ಮುಚ್ಚಲಾಗುತ್ತದೆ. ಚೌಡೇಶ್ವರಿ ದೇವಿಯ ದರ್ಶನ ಪಡೆಯಲು ಬಳ್ಳಾರಿ, ಗದಗ, ಬೆಂಗಳೂರು, ಹುಬ್ಬಳ್ಳಿ, ರಾಮನಗರ, ತುಮಕೂರು, ತಮಿಳುನಾಡಿನಿಂದಲೂ ಭಕ್ತರು ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.