ADVERTISEMENT

ಕನಿಷ್ಠ ವೇತನಕ್ಕೆ ಸಿಐಟಿಯು ಆಗ್ರಹ

ಜವಳಿ ಹಾಗೂ ಬೀಡಿ ಕಾರ್ಮಿಕರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 8:00 IST
Last Updated 30 ಜುಲೈ 2025, 8:00 IST
ಮಂಡ್ಯ ನಗರದ ಕಾರ್ಮಿಕ ಇಲಾಖೆ (ಉಪವಿಭಾಗ) ಕಚೇರಿ ಎದುರು ಸಿಐಟಿಯು ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು
ಮಂಡ್ಯ ನಗರದ ಕಾರ್ಮಿಕ ಇಲಾಖೆ (ಉಪವಿಭಾಗ) ಕಚೇರಿ ಎದುರು ಸಿಐಟಿಯು ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು   

ಮಂಡ್ಯ: ರಾಜ್ಯದಲ್ಲಿ ಎಲ್ಲ ಉದ್ದಿಮೆಗಳ ಮೇಲೆ ಕೋಷ್ಟಕಗಳಲ್ಲಿ ನಮೂದಿಸಿರುವ ರೀತಿಯಲ್ಲಿ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಸೆಂಟರ್‌ ಆಫ್‌ ಇಂಡಿಯನ್ ಟ್ರೇಡ್‌ ಯೂನಿಯನ್ಸ್‌ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಜೆ.ಸಿ. ವೃತ್ತದ ಬಳಿ ಜಮಾವಣೆಗೊಂಡ ಸಿಐಟಿಯು ಕಾರ್ಯಕರ್ತರು ಘೋಷಣೆ ಕೂಗಿದರು, ನಂತರ ಕಾರ್ಮಿಕ ಇಲಾಖೆ (ಉಪವಿಭಾಗ) ಕಚೇರಿವರೆಗೆ ಮೆರವಣಿಗೆ ನಡೆಸಿ ಅಧಿಕಾರಿ ಸವಿತಾ ಅವರಿಗೆ ಮನವಿ ನೀಡಿದರು.

ಕಲಂ 5(1)(ಎ) ಅಡಿಯಲ್ಲಿ ವೇತನ ನಿಗದಿಪಡಿಸುವ ವಿಧಾನವನ್ನು ಕೈಬಿಡಬೇಕು. 2025 ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಕನಿಷ್ಠ ವೇತನ ಜಾರಿಯಾಗಬೇಕು. ತುಟ್ಟಿ ಭತ್ಯೆಯನ್ನು 9,469 ಅಂಶಗಳಿಗೆ ಹೆಚ್ಚಾಗುವ ಪ್ರತಿ ಅಂಶಕ್ಕೂ ಪ್ರತಿ ದಿನಕ್ಕೆ ಆರು ಪೈಸೆ ರೀತಿಯಲ್ಲಿ ಪಾವತಿಸುವಂತಾಗಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರತಿ ಏಪ್ರಿಲ್‌ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ತುಟ್ಟಿಭತ್ಯೆಯ ಹೆಚ್ಚಳವನ್ನು ನೀಡುವಂತೆ ಪ್ರಕಟಿಸಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ಕನಿಷ್ಠ ವೇತನದ ಪುನರ್ವಿಮರ್ಶೆಯಾಗುವಂತಾಗಬೇಕು. ಟೈಲರಿಂಗ್‌ ಒಳಗೊಂಡಂತೆ ಜವಳಿ ಉದ್ದಿಮೆಗಳ ಹಾಗೂ ಬೀಡಿ ಕಾರ್ಮಿಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಸಿದರು.

ರಾಜ್ಯದಲ್ಲಿ ಬೀಡಿ ಕಾರ್ಮಿಕರಿಗೆ ವೇತನ ನಿಗದಿ ಪಡಿಸುವುದರಲ್ಲಿಯೂ ಅನ್ಯಾಯವಾಗಿದೆ. ಸಿದ್ಧ ಉಡುಪು ತಯಾರಿಕೆಯಲ್ಲಿನ ಕಾರ್ಮಿಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಕನಿಷ್ಠ ವೇತನ ನಿಗದಿಪಡಿಸಲು ವರ್ಷಕ್ಕೆ 72 ಯಾರ್ಡ್‌ ಬಟ್ಟೆಯ ಅಗತ್ಯ ಪೂರೈಸುವಂತೆ ಇರಬೇಕು. ಶಿಕ್ಷಣ ವೆಚ್ಚ, ವೈದ್ಯಕೀಯ ಅಗತ್ಯ ಹಬ್ಬಗಳ ಆಚರಣೆಗೆಂದು ಕನಿಷ್ಠ ವೇತನದಲ್ಲಿ ಶೇ 25ರಷ್ಟು ಪ್ರಮಾಣ ಹೊಂದಿರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಖಜಾಂಚಿ ಮಹದೇವಮ್ಮ, ಮುಖಂಡರಾದ ಮಂಜುಳಾರಾಜ್‌, ಜಯಲಕ್ಷ್ಮಮ್ಮ, ಪ್ರಮೀಳಾಕುಮಾರಿ, ಬಸವರಾಜು, ಶ್ರೀನಿವಾಸ್‌, ಚಂದ್ರಶೇಖರ್‌, ಎ.ಬಿ.ಶಶಿಕಲಾ, ಆನಂದ್‌ರಾಜ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.