ADVERTISEMENT

ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 3 ಮೇ 2024, 14:05 IST
Last Updated 3 ಮೇ 2024, 14:05 IST
ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಜಿಲ್ಲಾಧಿಕಾರಿ ಕುಮಾರ ಅವರ ಮೂಲಕ ಚುನಾವಣಾ ಆಯೋಗಕ್ಕೆ ಬಿಜೆಪಿ ಕಾರ್ಯಕರ್ತರು ದೂರು ನೀಡಿದರು
ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಜಿಲ್ಲಾಧಿಕಾರಿ ಕುಮಾರ ಅವರ ಮೂಲಕ ಚುನಾವಣಾ ಆಯೋಗಕ್ಕೆ ಬಿಜೆಪಿ ಕಾರ್ಯಕರ್ತರು ದೂರು ನೀಡಿದರು   

ಮಂಡ್ಯ: ‘ಸಂಸದ ಪ್ರಜ್ವಲ್ ರೇವಣ್ಣ ಅವರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಲ್ಲದ ಆರೋಪ ಮಾಡಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿ ಕುಮಾರ ಅವರ ಮೂಲಕ ಶುಕ್ರವಾರ ದೂರು ನೀಡಿದರು‌.

ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಮನವಿ ಸಲ್ಲಿಸಿ ರಾಹುಲ್‌ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

‘ಹಾಸನದ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರಂತಹ ಅತ್ಯಾಚಾರಿಗಳಿಗೆ ಕನ್ನಡಿಗರು ಮತ ಹಾಕಿದರೆ ನನಗೆ ಸಹಾಯವಾಗುತ್ತದೆ ಎಂದು ಮೋದಿ ಬಹಿರಂಗವಾಗಿ ಸಾರ್ವಜನಿಕ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿರುವ ರಾಹುಲ್‌ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಪ್ರಜ್ವಲ್ ರೇವಣ್ಣ ಅವರನ್ನು ಮೋದಿ ಸಮರ್ಥಿಸಿಕೊಂಡಿದ್ದಾರೆ ಎಂಬ ಹೇಳಿಕೆ ಅತ್ಯಂತ ಖಂಡನೀಯವಾದುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಜ್ವಲ್ ರೇವಣ್ಣ ಮೇಲೆ ಆರೋಪವಿರುವುದು ನಿಜ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ನೇಮಕ ಮಾಡಿದೆ. ಆಪಾದಿತನನ್ನು ವಿಚಾರಣೆಗೆ ಒಳಪಡಿಸಿಲ್ಲ. ಆರೋಪ ಸತ್ಯವೋ ಇಲ್ಲ ಮಿತ್ಯವೋ ಎನ್ನುವುದು ಸಾಬೀತಾಗಬೇಕಿದೆ. ವೀಡಿಯೊದ ಸತ್ಯಾಸತ್ಯತೆ ತನಿಖೆಯಾಗಬೇಕಿದೆ. ಈ ಕುರಿತಂತೆ ನ್ಯಾಯಾಲಯ ತೀರ್ಪು ನೀಡಬೇಕಿದೆ. ಆದರೆ ರಾಹುಲ್‌ಗಾಂಧಿಯವರು ತಾವೇ ನ್ಯಾಯಾಧೀಶರಂತೆ ‘ರೇಪಿಸ್ಟ್’ ಎಂದು ಆದೇಶ ನೀಡಿದ್ದಾರೆ’ ಎಂದು ಕಿಡಿಕಾರಿದರು.

‘ಪೆನ್‌ಡ್ರೈವ್ ನಲ್ಲಿ ಇದ್ದಾರೆನ್ನಲಾದ ಹೆಣ್ಣು ಮಕ್ಕಳ ಮಾನದ ವಿಚಾರದಲ್ಲಿ ಗೌಪ್ಯತೆ ಕಾಪಾಡಬೇಕಾಗಿದೆ. ಇದನ್ನು ಮಾಡದವರು ವಿಡಿಯೋ ಹರಿಬಿಟ್ಟರೆ ಹೆಣ್ಣುಮಕ್ಕಳ ಪ್ರಾಣಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.

ಮುಖಂಡರಾದ ಸಿ.ಟಿ. ಮಂಜುನಾಥ್, ನಿತ್ಯಾನಂದ, ಹೊಸಹಳ್ಳಿ ಶಿವು, ಮಾದರಾಜೇ ಅರಸ್, ಎಸ್.ಸಿ.ಯೋಗೇಶ್, ಸಾಗರ್, ಜ್ಯೋತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.