ಮಳವಳ್ಳಿ: ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ನಗರ ಭಾಗದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿ ಇದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆ, ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಸ್ತುತ ವೈಜ್ಞಾನಿಕ ಶಿಕ್ಷಣಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದರ ಜೊತೆಗೆ ಸೋಮಾರಿತನ ತೊರೆದು ಉನ್ನತ ಹುದ್ದೆ ಪಡೆಯುವಂತಾಗಬೇಕು. ತಂತ್ರಜ್ಞಾನ ಆಧಾರಿತ ಶಿಕ್ಷಣ ಪಡೆದು ಉದ್ಯೋಗ ಪಡೆಯಲು ಗಮನಹರಿಸಬೇಕು’ ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
‘ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈಗಾಗಲೇ ತಾಲ್ಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಣ ನೀಡುವ ಕಾರ್ಯ ಆರಂಭಿಸಿದ್ದು, ಇನ್ನೂ 2-3 ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ. ಡಿಜಿಟಲೀಕರಣಗೊಳ್ಳುತ್ತಿರುವ ರಾಜ್ಯದ ಮೊದಲ ತಾಲ್ಲೂಕು ಮಳವಳ್ಳಿ’ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಪಕ್ಕಕ್ಕೆ ಸ್ಥಳಾಂತರ ಮಾಡಲು ಸಿದ್ಧತೆ ನಡೆಸಿದ್ದು, ಶೀಘ್ರ ನೂತನ ಕಟ್ಟಡ ನಿರ್ಮಾಣವಾಗಲಿದೆ. ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಹಿಂಭಾಗಕ್ಕೆ ಸ್ಥಳಾಂತರಿಸಿ ಈ ಕಟ್ಟಡವನ್ನು ನೆಲಸಮ ಮಾಡಿ ಎಲ್ಲ ಇಲಾಖೆಗಳನ್ನು ಒಳಗೊಂಡ ಪ್ರಜಾಸೌಧ ನಿರ್ಮಾಣ ಮಾಡಲಾಗುವುದು. ಇನ್ನೂ ಕೆಲವೇ ದಿನಗಳಲ್ಲಿ ಅನುಮೋದನೆ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಕಾವೇರಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲೆ ಡಿ.ಯಶೋಧಾ ಮಾತನಾಡಿದರು. ತಾಲ್ಲೂಕು ಪಂಚಾಯತಿ ಇಒ ಎಚ್.ಜಿ. ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಬಿ.ಕೆ. ರವೀಂದ್ರಕುಮಾರ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಿದ್ದಾರ್ಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.