ADVERTISEMENT

₹ 1 ಕೋಟಿವರೆಗೆ ಪರಿಹಾರ ಪಡೆಯುವ ಅವಕಾಶ: ಬಿ.ಟಿ. ವಿಶ್ವನಾಥ್

ಗ್ರಾಹಕರ ಜಾಗೃತಿ ಕಾರ್ಯಕ್ರಮ; ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಟಿ. ವಿಶ್ವನಾಥ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 13:25 IST
Last Updated 17 ಮಾರ್ಚ್ 2021, 13:25 IST
ಕೆವಿಎಸ್‌ ಭವನದಲ್ಲಿ ನಡೆದ ಗ್ರಾಹಕರ ಜಾಗೃತಿ ಕಾರ್ಯಕ್ರಮಕ್ಕೆ ಬಿಐಎಸ್ ಜಂಟಿ ನಿರ್ದೇಶಕಿ ನಾಗವಲ್ಲಿ ಚಾಲನೆ ನೀಡಿದರು
ಕೆವಿಎಸ್‌ ಭವನದಲ್ಲಿ ನಡೆದ ಗ್ರಾಹಕರ ಜಾಗೃತಿ ಕಾರ್ಯಕ್ರಮಕ್ಕೆ ಬಿಐಎಸ್ ಜಂಟಿ ನಿರ್ದೇಶಕಿ ನಾಗವಲ್ಲಿ ಚಾಲನೆ ನೀಡಿದರು   

ಮಂಡ್ಯ: ‘ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ದೋಷಪೂರಿತ ಉತ್ಪನ್ನ ಪಡೆದು ವಂಚನೆಗೊಳಗಾದವರು ಗ್ರಾಹಕರ ನ್ಯಾಯಾಲಯದ ಮೂಲಕ ₹ 1 ಕೋಟಿವರೆಗೂ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದು ಎಂದು ಅಖಿಲ ಭಾರತ ವಕೀಲರ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ವಿಶ್ವನಾಥ್‌ ಹೇಳಿದರು.

ನಗರದ ಕರ್ನಾಟಕ ಸಂಘ ಕೆವಿಎಸ್‌ ಭವನದಲ್ಲಿ ಭಾರತೀಯ ಮಾನಕ ಬ್ಯೂರೊ (ಬಿಐಎಸ್) , ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್ , ಕ್ರೆಡಿಟ್-ಐ ಸಂಸ್ಥೆ, ಅಖಿಲ ಭಾರತದ ಗ್ರಾಹಕರ ಕಲ್ಯಾಣ ಪರಿಷತ್ ಸಹಯೋಗದಲ್ಲಿ ಬುಧವಾರ ನಡೆದ ಗ್ರಾಹಕರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೋಷಪೂರಿತ ಉತ್ಪನ್ನಗಳ ವಿರುದ್ಧ ಕಾನೂನು ಹೋರಾಟ ನಡೆಸುವ ಕೌಶಲ ಜ್ಞಾನ ಪಡೆಯಬೇಕು. ಪ್ರತಿ ಪ್ರಜೆಯೂ ಗ್ರಾಹಕರೇ ಆಗಿದ್ದು ಆಧುನಿಕ ಯುಗದಲ್ಲಿ ಗ್ರಾಹಕರಿಗೆ ನ್ಯಾಯಸಮ್ಮತವಾದ, ಸುರಕ್ಷಿತವಾದ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನ ಪಡೆಯುವ ಹಕ್ಕಿದೆ. ದೋಷಪೂರಿತ ವಸ್ತುಗಳನ್ನು ಖರೀದಿ ಮಾಡಿ ಮೋಸ ಹೋದಾಗ ಅದರ ವಿರುದ್ಧ ಕಾನೂನು ಹೋರಾಟ ನಡೆಸಬೇಕು. ವಂಚನೆಗೊಳಗಾದವರು ಗ್ರಾಹಕರ ನ್ಯಾಯಾಲಯಗಳಲ್ಲಿ ದೂರು ದಾಖಲಿಸಬೇಕು’ ಎಂದರು.

ADVERTISEMENT

‘ಹೊಸ ಕಾಯ್ದೆಯನ್ವಯ ಗ್ರಾಹಕರು ಪಡೆಯಬಹುದುದಾದ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದೆ. ಜಿಲ್ಲಾ ಗ್ರಾಹಕರ ನ್ಯಾಯಲಯದ ಮುಂದೆ ದೂರು ಸಲ್ಲಿಸಬಹುದು. ಗ್ರಾಹಕರು ವಾಸಿಸುವ ಜಿಲ್ಲಾ ವ್ಯಾಪ್ತಿಯ ಗ್ರಾಹಕರ ಆಯೋಗಕ್ಕೂ ದೂರನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವ್ಯಾಜ್ಯಗಳು 3 ತಿಂಗಳಿಂದ, 6 ತಿಂಗಳೊಳಗೆ ಇತ್ಯರ್ಥ್ಯಗೊಳ್ಳಲಿವೆ’ ಎಂದರು.

‘ಕಳಪೆ ಗುಣಮಟ್ಟದ ಉತ್ಪನ್ನ ಪೂರೈಸಿದರೆ ₹ 25 ಸಾವಿರದಿಂದ ಗರಿಷ್ಠ ₹ 1 ಲಕ್ಷದವರೆಗೂ ದಂಡ ವಿಧಿಸುವ ಅವಕಾಶವಿದೆ. ಆರೋಪ ಸಾಬೀತಾದರೆ ಕನಿಷ್ಠ ಒಂದು ತಿಂಗಳಿಂದ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ. ಉತ್ಪನ್ನಗಳಿಂದ ಗ್ರಾಹಕರಿಗೆ ತೀವ್ರ ಗಾಯಗೊಂಡಲ್ಲಿ ₹ 5 ಲಕ್ಷ ದಂಡ, ಏಳು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಗ್ರಾಹಕರಿಗೆ ಪ್ರಾಣಹಾನಿ ಉಂಟಾದಲ್ಲಿ ಅವರ ಕುಟುಂಬ ಸದಸ್ಯರಿಗೆ ₹ 10 ಲಕ್ಷದವರೆಗೆ ಪರಿಹಾರ ವಿತರಣೆ ಮಾಡಲಾಗುತ್ತದೆ’ ಎಂದರು.

ಅಖಿಲ ಭಾರತದ ಗ್ರಾಹಕರ ಕಲ್ಯಾಣ ಪರಿಷತ್ ರಾಜ್ಯ ಘಟಕದ ಅಧ್ಯಕ್ಷರಾದ ಡಾ.ಎಂ.ಪಿ.ವರ್ಷಾ ಮಾತನಾಡಿ ‘ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತರಾಗಬೇಕು. ವಸ್ತುಗಳ ಗುಣಮಟ್ಟದ ಕುರಿತು ತಿಳಿವಳಿಕೆ ಹೊಂದಬೇಕು. ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರಿದ್ದು, ಶೋಷಣೆಗೆ ಒಳಗಾಗುತ್ತಿದ್ದಾರೆ. ಗ್ರಾಹಕರಿಗಾಗಿ ಸರ್ಕಾರ ಹಲವು ಕಾಯ್ದೆ ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

‘1986ರಲ್ಲಿ ಗ್ರಾಹಕರ ಸಂರಕ್ಷಣೆ ಕಾಯ್ದೆ ಜಾರಿಗೆ ಬಂದಿದೆ. 2019ರಲ್ಲಿ ಕೇಂದ್ರ ಸರ್ಕಾರ ಗ್ರಾಹಕರ ಸಂರಕ್ಷಣೆ ಕಾಯ್ದೆಗೆ ತಿದ್ದುಪಡಿ ತಂದಿದ್ದು ಗ್ರಾಹಕರು ಮೋಸ ಹೋದರೆ ಆನ್‌ಲೈನ್‌ ಮೂಲಕವೂ ದೂರು ಸಲ್ಲಿಸುವ ಅವಕಾಶ ನೀಡಲಾಗಿದೆ’ ಎಂದರು.

ಅಖಿಲ ಭಾರತದ ಗ್ರಾಹಕರ ಕಲ್ಯಾಣ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣೇಗೌಡ, ಬಿಐಎಸ್ ಜಂಟಿ ನಿರ್ದೇಶಕಿ ನಾಗವಲ್ಲಿ, ವಿಜ್ಞಾನಿ ಪವನ್‌ಕುಮಾರ್ ವೋರ, ಬಿ.ಎಸ್‌. ಅನುಪಮಾ, ಮಹಿಳಾ ಸಂಘಟಕರಾದ ನಾಗರತ್ನಾ, ಸಮಾಜಸೇವಕರಾದ ಬಸವರಾಜು, ಮ್ಯಾಥ್ಯೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.