ADVERTISEMENT

ಕಾರ್ಪೋರೇಟ್‌ ಪ್ರವೇಶದಿಂದ ವೈದ್ಯ ವೃತ್ತಿ ಕಲುಷಿತ: ಡಾ.ಜಗದೀಶ್‌ ಕುಮಾರ್‌ ಹೇಳಿಕೆ

ಸಾಧನೆ ಮಾಡಿದ ವೈದ್ಯರಿಗೆ ಸನ್ಮಾನ:

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 2:55 IST
Last Updated 13 ಜುಲೈ 2025, 2:55 IST
ಮಂಡ್ಯ ನಗರದ ಕಾಳೇಗೌಡ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧನೆ ಮಾಡಿರುವ ವೈದ್ಯರನ್ನು ಸನ್ಮಾನಿಸಲಾಯಿತು
ಮಂಡ್ಯ ನಗರದ ಕಾಳೇಗೌಡ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧನೆ ಮಾಡಿರುವ ವೈದ್ಯರನ್ನು ಸನ್ಮಾನಿಸಲಾಯಿತು   

ಮಂಡ್ಯ: ‘ವೈದ್ಯ ಸಮುದಾಯಕ್ಕೆ ಕಾರ್ಪೋರೇಟ್‌ ವಲಯ ಕಾಲಿಟ್ಟಿರುವುದರಿಂದ ಬಡವರು ಚಿಕಿತ್ಸೆ ಪಡೆಯಲು ದುಬಾರಿಯಾಗಿದೆ. ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ತಂದು ಬದಲಾವಣೆ ಮಾಡುತ್ತಿದ್ದರೂ ಸಾಲುತ್ತಿಲ್ಲ. ಜೊತೆಗೆ ವೈದ್ಯಕೀಯ ವೃತ್ತಿಯು ಪ್ರಸ್ತುತದಲ್ಲಿ ಕಲುಷಿತಗೊಂಡಿದೆ’ ಎಂದು ಮಕ್ಕಳ ತಜ್ಙ ಡಾ.ಜಗದೀಶ್‌ ಕುಮಾರ್‌ ವಿಷಾದಿಸಿದರು.

ನಗರದ ಕಾಳೇಗೌಡ ಪ್ರೌಢಶಾಲೆ ಆವರಣದಲ್ಲಿ ನಗರದ ಸಂತೋಷ್ ಪಿಯು ಕಾಲೇಜು ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಶನಿವಾರ ನಡೆದ ವೈದ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ವೈದ್ಯ ವೃತ್ತಿ ದುಡ್ಡಿಗಾಗಿ ಬಂದಿರುವುದಿಲ್ಲ. ಜನ ಸೇವೆಗಾಗಿ ಬಂದಿದ್ದು, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಸೇವೆ ಮಾಡಿದಾಗ ಮಾತ್ರ ಜನಮನ್ನಣೆ ಗಳಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ತಿಳಿದೋ ತಿಳಿಯದೋ ಕಾರ್ಪೋರೇಟ್‌ ಸಂಸ್ಕೃತಿ ಕಾಲಿಟ್ಟಿತ್ತು. ಅದನ್ನು ಬಳಕೆ ಮಾಡಿಕೊಂಡ ನಾವು ಅದರಿಂದ ಬರಲು ಆಗದೆ ವೈದ್ಯ ಸಮುದಾಯಕ್ಕೆ ಕೆಟ್ಟ ಹೆಸರು ಬರುವಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ’ ಎಂದು ಹತಾಶರಾಗಿ ನುಡಿದರು.

ADVERTISEMENT

‘ಕೆಲವು ವೈದ್ಯರು ತಮಗಿಷ್ಟ ಇಲ್ಲದಿದ್ದರು ಕಾರ್ಪೋರೇಟ್‌ ಸಂಸ್ಕೃತಿಗೆ ಒಗ್ಗಿಕೊಳ್ಳುವಂತಾಗಿರುವ ಸ್ಥಿತಿ ಇರುವುದು ದುರಂತ. ಆಸ್ಪತ್ರೆಗಳಲ್ಲಿನ ಖರ್ಚು ವೆಚ್ಚಗಳ ಪ್ರಮಾಣವೂ ಹೆಚ್ಚಾಗಿರುವುದರಿಂದ ಪ್ರತಿಯೊಂದು ಚಿಕಿತ್ಸೆಗೂ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಹೆಚ್ಚಾಗುತ್ತಲೇ ಇದೆ. ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಯೋಜನೆಗಳನ್ನು ಮಾಡುತ್ತಿದೆ, ಆದರೆ ಅದು ಸಾಲುತ್ತಿಲ್ಲ’ ಎಂದರು.

‘ಈ ಹಿಂದೆ ಕೇವಲ ಹತ್ತು ಎಕರೆ ಜಮೀನು ಹೊಂದಿದ ರೈತ ಶ್ರೀಮಂತ ಎನ್ನಬಹುದಿತ್ತು. ಆದರೆ 50ಕ್ಕೂ ಹೆಚ್ಚು ಎಕೆರೆ ಜಮೀನು ಹೊಂದಿರುವ ರೈತರಿಗೆ ಬೇಡುವ ಸ್ಥಿತಿ ಇಂದು ಬಂದಿದೆ. ಇದಕ್ಕೆ ಕಾರಣ ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದೇ ಆಗಿದೆ. ಇನ್ನೊಂದೆಡೆ ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ಬೆಲೆ ಸಿಗುತ್ತಿಲ್ಲ. ಯಾವುದೇ ಬೆಳೆ ಬೆಳೆದರು ರೈತರು ಖರ್ಚು ಮಾಡಿದ ಹಣ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನಾದರೂ ರೈತರ ಕಷ್ಟ ಕೇಳುವಂತಾಗಬೇಕು’ ಎಂದು ಮನವಿ ಮಾಡಿದರು.

ಕಾಲೇಜಿನ ಪ್ರಾಂಶುಪಾಲ ಬಿ.ಸಂತೋಷ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಸಾಧನೆ ಮಾಡಿರುವ 16 ವೈದ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಸಿ.ಎಸ್.ರವಿ, ಡಾ.ಕೆ.ಸಿ.ಶ್ರೀಧರ್, ಡಾ.ಶಶಿಕಲಾ ಆರ್, ಡಾ.ಸಿ.ನಿಂಗಯ್ಯ, ಡಾ.ತನುಶ್ರಿ, ಸಂಸ್ಥೆಯ ಉಪಾಧ್ಯಕ್ಷ ಗುರುಸ್ವಾಮಿ, ಮುಖಂಡ ಗುರು ಇದ್ದರು.

ಪಿಯುಸಿ ಘಟ್ಟವು ವಿದ್ಯಾರ್ಥಿಗಳಿಗೆ ತಪಸ್ಸು ಇದ್ದಹಾಗೆ ಇದನ್ನು ಗಂಭೀರ ಹಾಗೂ ಸವಾಲಾಗಿ ಸ್ವೀಕರಿಸಿ ತಮ್ಮ ಕನಸು ನನಸು ಮಾಡಿಕೊಳ್ಳಲು ಶ್ರಮ ಪಡಬೇಕು
ಕೆ.ಟಿ.ಶ್ರೀಕಂಠೇಗೌಡ ವಿಧಾನ ಪರಿಷತ್‌ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.