ADVERTISEMENT

ಭ್ರಷ್ಟಾಚಾರ ಕ್ಯಾನ್ಸರ್‌ಗಿಂತ ದೊಡ್ಡ ಪಿಡುಗು:ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ

​ಪ್ರಜಾವಾಣಿ ವಾರ್ತೆ
Published 27 ಮೇ 2025, 11:34 IST
Last Updated 27 ಮೇ 2025, 11:34 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟ ವೆಂಕಟರಮಣಸ್ವಾಮಿ ಸಸ್ಯೋದ್ಯಾನದಲ್ಲಿ ನ್ಯಾಯಮೂರ್ತಿ ಉಪ ಲೋಕಾಯುಕ್ತ ಬಿ. ವೀರಪ್ಪ ಮಂಗಳವಾರ ಸಸಿ ನೆಟ್ಟು ನೀರೆರೆದರು
ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟ ವೆಂಕಟರಮಣಸ್ವಾಮಿ ಸಸ್ಯೋದ್ಯಾನದಲ್ಲಿ ನ್ಯಾಯಮೂರ್ತಿ ಉಪ ಲೋಕಾಯುಕ್ತ ಬಿ. ವೀರಪ್ಪ ಮಂಗಳವಾರ ಸಸಿ ನೆಟ್ಟು ನೀರೆರೆದರು   

ಶ್ರೀರಂಗಪಟ್ಟಣ: ‘ಭ್ರಷ್ಟಾಚಾರ ಕ್ಯಾನ್ಸರ್‌ಗಿಂತ ದೊಡ್ಡ ಪಿಡುಗಾಗಿದ್ದು, ನಮ್ಮದಲ್ಲದ ಹಣದಲ್ಲಿ ಬದುಕುವುದಿಲ್ಲ ಎಂದು ವಿದ್ಯಾರ್ಥಿಗಳು ಇಂದೇ ಶಪಥ ಮಾಡಬೇಕು’ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ತಿಳಿಸಿದರು.

ತಾಲ್ಲೂಕಿನ ಕರಿಘಟ್ಟದಲ್ಲಿ ಮಂಗಳವಾರ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರದ ಹಣ ತರುವ ಪೋಷಕರನ್ನು ಮಕ್ಕಳು ಪ್ರಶ್ನಿಸಬೇಕು. ಪ್ರಕೃತಿ ನಾಶ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನಲ್ಲಿದ್ದ ಕೆರೆಗಳನ್ನು ಮುಚ್ಚಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಮಳೆಗಾಲದಲ್ಲಿ ಜನವಸತಿ ಪ್ರದೇಶ ಜಲಾವೃತವಾಗುತ್ತಿದೆ. ವಯನಾಡಿನ ಹೆತ್ತೂರು ಗ್ರಾಮ ಕೆಲವೇ ಗಂಟೆಗಳಲ್ಲಿ ನಾಶವಾಗಿರುವ ದುರಂತ ನಮಗೆ ಪಾಠವಾಗಬೇಕು’ ಎಂದರು.

‘ಕಾಡಿಗೆ ಬೆಂಕಿ ಹಚ್ಚಿದರೆ ಮಕ್ಕಳಾಗುತ್ತವೆ ಎಂಬ ಮೂಢ ನಂಬಿಕೆಯಿಂದ ಕರಿಘಟ್ಟ ಅರಣ್ಯಕ್ಕೆ ಪ್ರತಿವರ್ಷ ಬೆಂಕಿ ಹಚ್ಚಲಾಗುತ್ತಿದೆ ಎಂಬ ವಿಷಯ ತಿಳಿದು ಆಘಾತವಾಗಿದೆ. ಕಾಡಿಗೆ ಬೆಂಕಿ ಬಿದ್ದರೆ ವನ್ಯ ಸಂಪತ್ತು ನಾಶವಾಗಲಿದೆ. ಬೆಂಕಿ ನಂದಿಸಲು ಅರಣ್ಯದಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು’ ಎಂದು ಡಿಸಿಎಫ್‌ ರಾಜು ಅವರಿಗೆ ಸೂಚಿಸಿದರು.

ADVERTISEMENT

‘ನಾವು ನೆಮ್ಮದಿಯಾಗಿ ಜೀವನ ನಡೆಸಲು ಸೈನಿಕರ ತ್ಯಾಗ, ಬಲಿದಾನ ಕಾರಣ. ಹೊಸದಾಗಿ ಮದುವೆಯಾದ ಯೋಧ ತನ್ನ ಮೊದಲ ರಾತ್ರಿಯ ಸಂಭ್ರಮವನ್ನು ಬಿಟ್ಟು ದೇಶ ಸೇವೆಗೆ ದೌಡಾಯಿಸಿದ್ದು ಮತ್ತು ಮಹಿಳಾ ಯೋಧೆ ತನ್ನ 10 ತಿಂಗಳ ಮಗುವನ್ನು ಬಿಟ್ಟು ದೇಶದ ಗಡಿಗೆ ತೆರಳಿದ ಪ್ರಸಂಗಗಳಿಗೆ ಬೆಲೆ ಕಟ್ಟಲಾಗದು ’ಎಂದು ಅವರು ಸ್ಮರಿಸಿದರು.

ಪರಿಸರವಾದಿಗಳಾದ ಡಾ.ಬಿ.ಸುಜಯಕುಮಾರ್‌, ರಮೇಶ್ ಮತ್ತು ಆರ್. ರಾಘವೇಂದ್ರ ಅವರನ್ನು ನ್ಯಾಯಮೂರ್ತಿ ಬಿ. ವೀರಪ್ಪ ಸನ್ಮಾನಿಸಿದರು.

ನದಿ ತೀರಗಳಿಗೆ ಭೇಟಿ:

ಪಟ್ಟಣದ ಬಂಗಾರದೊಡ್ಡಿ ಅಣೆಕಟ್ಟೆ ಸಮೀಪ ಕಾವೇರಿ ನದಿ ತೀರಕ್ಕೆ ಉಪ ಲೋಕಾಯುಕ್ತ ಬಿ. ವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಬಫರ್‌ ಜೋನ್‌ ಗುರುತಿಸಿ ಹದ್ದುಬಸ್ತು ನಿಗದಿಪಡಿಸಬೇಕು. ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡಿದ್ದರೆ ನೋಟಿಸ್‌ ನೀಡಬೇಕು. ನದಿಯ ಜಾಗ ಒತ್ತುವರಿಯಾಗಿದ್ದರೆ ತೆರವು ಮಾಡಿಸಬೇಕು’ ಎಂದು ತಹಶೀಲ್ದಾರ್‌ ಅವರಿಗೆ ಸೂಚಿಸಿದರು.

ಐತಿಹಾಸಿಕ ವೆಲ್ಲೆಸ್ಲಿ ಸೇತುವೆಯನ್ನು ವೀಕ್ಷಿಸಿದ ನ್ಯಾಯಮೂರ್ತಿ ಬಿ. ವೀರಪ್ಪ, ಸೇತುವೆಯ ಸಂರಕ್ಷಣೆಗೆ ಕ್ರಮ ವಹಿಸಬೇಕು. ನದಿಗೆ ತ್ಯಾಜ್ಯ ಸೇರದಂತೆ ನೋಡಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರಾಜಣ್ಣ ಅವರಿಗೆ ಹೇಳಿದರು.

ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಕೆ.ಆರ್‌. ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಲೋಕಾಯುಕ್ತ ಉಪ ನಿಬಂಧಕರಾದ ಅರವಿಂದ್‌, ಮಿಲನಾ, ಲೋಕಾಯುಕ್ತ ಜಿಲ್ಲಾ ಅಧೀಕ್ಷಕ ಸುರೇಶಬಾಬು, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್‌, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ಜತೆಗಿದ್ದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟದಲ್ಲಿ ಮಂಗಳವಾರ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಪರಿಸರವಾದಿಗಳಾದ ಡಾ.ಬಿ.ಸುಜಯಕುಮಾರ್‌ ರಮೇಶ್ ಮತ್ತು ಆರ್. ರಾಘವೇಂದ್ರ ಅವರನ್ನು ಸನ್ಮಾನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.