ADVERTISEMENT

‘ಕೋವಿಡ್; ಗ್ರಾಮ ಮಟ್ಟದಿಂದಲೇ ಜಾಗೃತಿ’

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 5:11 IST
Last Updated 25 ಏಪ್ರಿಲ್ 2021, 5:11 IST
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ಸಚಿವ ನಾರಾಯಣ ಗೌಡ ಭೇಟಿ ನೀಡಿ ಕೋವಿಡ್ ನಿಯಂತ್ರಣದ ಕುರಿತು ಚರ್ಚಿಸಿದರು
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ಸಚಿವ ನಾರಾಯಣ ಗೌಡ ಭೇಟಿ ನೀಡಿ ಕೋವಿಡ್ ನಿಯಂತ್ರಣದ ಕುರಿತು ಚರ್ಚಿಸಿದರು   

ನಾಗಮಂಗಲ: ಕೋವಿಡ್‌ ಎರಡನೇ ಅಲೆಯಿಂದಾಗಿ ಸೋಂಕು ವೇಗವಾಗಿ ಹೆಚ್ಚಾಗುತ್ತಿದ್ದು, ಸೋಂಕನ್ನು ಪರಿಣಾಮ ಕಾರಿಯಾಗಿ ನಿಯಂತ್ರಿಸಲು ಗ್ರಾಮ ಮಟ್ಟದಲ್ಲೇ ಗ್ರಾ.ಪಂ.ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಶಾಸಕರೂ ಜಾಗೃತಿ ಮೂಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.

ತಾಲ್ಲೂಕಿನ ಬಿ.ಜಿ.ನಗರದ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಸ್ಪತ್ರೆಯಲ್ಲಿರುವ ಕೋವಿಡ್ ಕೇಂದ್ರಕ್ಕೆ ಪಿ.ಪಿ.ಇ ಕಿಟ್ ಧರಿಸಿ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಣೆ ನಡೆಸಿದ ಮಾಹಿತಿ ತಿಳಿದು ಇಲ್ಲಿಗೆ ಧಾವಿಸಿದ್ದೇನೆ. ಕೋವಿಡ್ ನಿಯಂತ್ರಣ ಸಂಬಂಧ ಸ್ವಾಮೀಜಿ ಜತೆ ಚರ್ಚಿಸಿದ್ದೇವೆ. ಸರ್ಕಾರದಿಂದ ಚಿಕಿತ್ಸೆಗೆ ಬೇಕಾದ ಸಾಮಗ್ರಿ ತಲುಪಿದೆ. ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳ ಸಮಸ್ಯೆ ಇದ್ದು, ಸಮಸ್ಯೆ ಬಗೆಹರಿಸಲು ಸ್ವಾಮೀಜಿ ಅವರು ಆಸ್ಪತ್ರೆಯ ಮುಖ್ಯಸ್ಥರಿಗೆ ತಿಳಿಸಿದ್ದಾರೆ ಎಂದರು.

ಕಳೆದ ಬಾರಿಯ ಕೋವಿಡ್ ಅಲೆ ಹೆಚ್ಚಾದಾಗಲೂ ಸ್ವಾಮೀಜಿ ಮುಂದಾಳತ್ವದಲ್ಲೇ ಸಭೆ ಕರೆದು ಚರ್ಚಿಸಲಾಗಿತ್ತು. ಸ್ವಾಮೀಜಿ ಸಲಹೆ ಯಂತೆ, ಸರ್ಕಾರದ ನಿರ್ದೇಶನದಂತೆ ಎಲ್ಲರೂ ಶ್ರಮಿಸಿ ಸೋಂಕು ನಿಯಂತ್ರಣಕ್ಕೆ ಯಶಸ್ವಿಯಾಗಿದ್ದೆವು. ನಾಗಮಂಗಲ, ಕೆ.ಆರ್‌.ಪೇಟೆ ಮತ್ತು ಪಾಂಡವಪುರ ಆಸ್ಪತ್ರೆಗಳಿಗೆ‌ ಭೇಟಿ ನೀಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಜನರೂ ಮಾರ್ಗಸೂಚಿ ಪಾಲಿಸಬೇಕು ಎಂದು ಸೂಚಿಸಿದರು.

ADVERTISEMENT

ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಸಚಿವ ನಾರಾಯಣ ಗೌಡ ಭೇಟಿ ನೀಡಿ ಪರಿಶೀಲಿಸಿದರು. ಕೋವಿಡ್ ರೋಗಿಗಳ ಮೊಬೈಲ್ ನಂಬರ್ ನೀಡಿ. ಅವರಿಂದ ಮಾಹಿತಿ‌ ಪಡೆಯುತ್ತೇನೆ ಎಂದು ಆಡಳಿತಾಧಿಕಾರಿಗಳಿಗೆ ಸೂಚಿಸಿದರು.

ಸ್ವಾಮೀಜಿ ಭೇಟಿ: ತಾಲ್ಲೂಕಿನ ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಪಿಪಿಇ ಕಿಟ್ ಧರಿಸಿ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ನೀಡಿ ಪರಿಶೀಲಿಸಿದರು.

ಸುದ್ದಿಗಾರರೊಂದಿಗೆ‌ ಮಾತನಾ ಡಿದ ಅವರು, ಮಠದ ಆಸ್ಪತ್ರೆಗಳ ವತಿಯಿಂದ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದೇವೆ. ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯ ಒದಗಿಸಿದ್ದು, 250ಕ್ಕೂ ಹೆಚ್ಚು ಹಾಸಿಗೆಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವೆಂಟಿಲೇಟರ್ ಮತ್ತು ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಭಯಪಡುವ ಅಗತ್ಯವಿಲ್ಲ ಎಂದರು.

ಅಗತ್ಯ ಬಿದ್ದರೆ ಬೆಂಗಳೂರಿನಲ್ಲಿರುವ ನಮ್ಮ ವಿದ್ಯಾರ್ಥಿನಿಲಯಗಳನ್ನು ಬಳಕೆ ಮಾಡಿಕೊಳ್ಳುವಂತೆ ಸರ್ಕಾರಕ್ಕೂ ತಿಳಿಸಲಾಗಿದೆ. ಲಸಿಕೆ ಪಡೆಯಲು ಭಯಪಡುವ ಅಗತ್ಯವಿಲ್ಲ. ಎಲ್ಲರೂ ಕೋವಿಡ್ ಲಸಿಕೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.