ADVERTISEMENT

ಲಸಿಕೆ ಪಡೆಯದಿದ್ದರೆ ಪಡಿತರ ಇಲ್ಲ: ವದಂತಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 13:07 IST
Last Updated 5 ಏಪ್ರಿಲ್ 2021, 13:07 IST

ಮಂಡ್ಯ: ಕೋವಿಡ್‌ ಲಸಿಕೆ ಪಡೆಯದಿದ್ದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕೊಡುವುದಿಲ್ಲ ಎಂದು ಬೆದರಿಸಿ ಹಳ್ಳಿಯ ಜನರಿಗೆ ಲಸಿಕೆ ಹಾಕಿಸಿಕೊಳ್ಳಲು ಒತ್ತಾಯಿಸುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಏ.1ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದ್ದು ದಿನಕ್ಕೆ 2 ಸಾವಿರ ಜನರಿಗೆ ಲಸಿಕೆ ಹಾಕುವ ಗುರಿ ಇದೆ. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಉಪ ಕೇಂದ್ರಗಳಲ್ಲೂ ಲಸಿಕೆ ದೊರೆಯುತ್ತಿದೆ. ಹಳ್ಳಿಗಳ ಜನರು ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ತೋರದ ಕಾರಣ ಕಂದಾಯ, ಆರೋಗ್ಯ ಇಲಾಖೆ ಸಿಬ್ಬಂದಿ, ಲಸಿಕೆ ಪಡೆಯದಿದ್ದರೆ ಪಡಿತರ ಸಿಗುವುದಿಲ್ಲ ಎಂಬ ಬೆದರಿಸುತ್ತಿದ್ದಾರೆ ಎಂಬ ಸಂದೇಶಗಳು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ.

‘ನಮ್ಮ ತೋಟಕ್ಕೆ ಬರುವ ಕೆಲಸಗಾರರು ಅರ್ಧದಿನ ರಜೆ ಪಡೆದು ತೆರಳಿದರು. ಕಾರಣ ಕೇಳಿದರೆ, ಕೋವಿಡ್‌ ಲಸಿಕೆ ಪಡೆಯಬೇಕು, ಪಡೆದಿದ್ದರೆ ಪಡಿತರ ಕೊಡುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಹೆದರಿಸಿದ್ದಾಗಿ ತಿಳಿಸಿದರು’ ಎಂದು ಫೇಸ್‌ಬುಕ್‌ನಲ್ಲಿ ಸಂದೇಶ ಪ್ರಕಟಿಸಿದ್ದ ವ್ಯಕ್ತಿಯೊಬ್ಬರು ತಿಳಿಸಿದರು.

ADVERTISEMENT

‘ಇದೊಂದು ವದಂತಿಯಾಗಿದ್ದು ಸರ್ಕಾರಿ ಸೌಲಭ್ಯ ನಿಲ್ಲಿಸುವ ಬೆದರಿಕೆ ಹಾಕುವ ಅಧಿಕಾರ ಯಾರಿಗೂ ಇಲ್ಲ. ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ನಾವು ಒತ್ತಾಯ ಮಾಡುತ್ತಿಲ್ಲ, ಬದಲಾಗಿ ಅರಿವು ಮೂಡಿಸುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.