ಶ್ರೀರಂಗಪಟ್ಟಣ: ಪಟ್ಟಣದಲ್ಲಿ ದಸರಾ ಉತ್ಸವದ ನಿಮಿತ್ತ ಭಾನುವಾರ ನಡೆದ ಪ್ರಧಾನ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ 30ಕ್ಕೂ ಹೆಚ್ಚು ಕವಿಗಳು ಸಾಮಾಜಿಕ, ಧಾರ್ಮಿಕ ಸಮಸ್ಯೆಗಳು ಹಾಗೂ ಸಾಮಾಜಿಕ ಅಶಾಂತಿ ಸೃಷ್ಟಿಸುತ್ತಿರುವವರ ಹುನ್ನಾರ ಬಯಲು ಮಾಡಿದರು.
ಕವಿ ಕೆ.ಶೆಟ್ಟಹಳ್ಳಿ ಅಪ್ಪಾಜಿ ತಮ್ಮ ‘ಎಚ್ಚರ’ ಕವಿತೆಯಲ್ಲಿ ‘ದಸರಾ ಉತ್ಸವ ಉದ್ಘಾಟಿಸಿದ ಬಾನು ಮುಷ್ತಾಕ್ ಎಲ್ಲರ ಎದೆಯ ಹಣತೆ ಬೆಳಗಿಸಿದ್ದಾರೆ. ತಾರತಮ್ಯ ದೂರಾಗಲಿ ಎಂಬ ಸಂದೇಶ ನೀಡಿದ್ದಾರೆ’ ಎಂದು ಹೇಳಿದರು.
‘ಬುದ್ಧನುದಿಸಿದ ನಾಡಿನಲ್ಲಿ ಶಾಂತಿ ಅರಸುತ್ತ’ ಕವಿತೆ ವಾಚಿಸಿದ ಕವಿ ಗಾನಾಸುಮಾ ಪಟ್ಟಸೋಮನಹಳ್ಳಿ, ಮೌಢ್ಯತೆ ದುಷ್ಪರಿಣಾಮಗಳನ್ನು ಬಿಂಬಿಸಿದರು. ಮಹಿಳೆಯರ ಶೋಷಣೆ, ಪುರುಷ ಪ್ರಧಾನ ವ್ಯವಸ್ಥೆ ಮೇಲಾಟಗಳನ್ನು ಖಂಡಿಸಿದರು. ಸಮಾನತೆಯ ಸಮಾಜಕ್ಕೆ ಬುದ್ಧನ ಸಂದೇಶಗಳಲ್ಲಿ ಉತ್ತರವಿದೆ ಎಂದರು.
ಸಬನಹಳ್ಳಿ ಶಶಿಧರ ತಮ್ಮ ‘ನಮ್ ಜನಗೋಳು’ ಎಂಬ ವಿಡಂಬನಾತ್ಮಕ ಕವಿತೆಯಲ್ಲಿ ವಾಸ್ತವ ಸ್ಥಿತಿ ಮತ್ತು ತೋರಿಕೆಯ ಜೀವನ ನಡೆಸುವವರನ್ನು ಲೇವಡಿ ಮಾಡಿದರು. ‘ಸರ್ಕಾರಿ ಸಂಬಳ ಪಡೆಯುವವರಿಗೆ ಸರ್ಕಾರಿ ಶಾಲೆಗಳು ಏಕೆ ಬೇಡ’ ಎಂದು ಪ್ರಶ್ನಿಸಿದರು. ಕವಿ ಅಂಬರಹಳ್ಳಿ ಸ್ವಾಮಿ ತಮ್ಮ ‘ಪರಿಣಾಮ’ ಕವಿತೆಯಲ್ಲಿ, ಮದ್ದೂರಿನಲ್ಲಿ ಗಣೇಶ ಉತ್ಸವ ಮೇಲೆ ಕಲ್ಲು ತೂರಿದ ಪ್ರಸಂಗ ಮತ್ತು ಅದರಲ್ಲಿ ಬೆಂಕಿ ಕಾಯಿಸಿಕೊಂಡವರ ದ್ವಂದ್ವ ನೀತಿ ಬಯಲು ಮಾಡಿದರು.
ಜಿ.ಬಿ. ಮಂಜುಳಾ ತಮ್ಮ ‘ಸರಸ್ವತಿ ಪುತ್ರ’ ಕವಿತೆಯಲ್ಲಿ ದಿವಂಗತ ಎಸ್.ಎಲ್. ಭೈರಪ್ಪ ಅವರ ಸಾಹಿತ್ಯ ಕೃಷಿಯ ಪರಿ ತಿಳಿಸಿದರು. ಶ್ರೇಷ್ಠ ಕಾದಂಬರಿಕಾರನಿಗೆ ನುಡಿ ನಮನ ಸಲ್ಲಿಸಿದರು. ‘ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹೇಡಿತನ ಕಂಡು ಮಹಾತ್ಮ ಗಾಂಧಿ ಸ್ವರ್ಗದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದಾರೆ’ ಎಂದು ಕದಲಗೆರೆ ಜಯರಾಂ ತಮ್ಮ ‘ಆತ್ಮಹತ್ಯೆ ಪರಿಹಾರವೆ?’ ಎಂಬ ಕವಿತೆಯಲ್ಲಿ ಹೇಳಿದರು.
ಕವಿಗಳಾದ ಮಜ್ಜಿಗೆಪುರ ಶಿವರಾಂ, ಆರ್. ಸೋಮಶೇಖರ್, ಆನಂದಮೂರ್ತಿ, ಎ.ಎನ್. ಲತಾ, ಶ್ವೇತಾ, ರಾಜೇಶ್, ಶ್ವೇತಾ ಪ್ರಕಾಶ್, ಅಶ್ವಿನಿ ದಕ್ಷಿಣಾಮೂರ್ತಿ, ಮಹದೇವಸ್ವಾಮಿ, ಕಾಡು ಬೋರಣ್ಣ, ರಾಮಚಂದ್ರು ಕವಿತೆ ವಾಚಿಸಿದರು.
ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ‘ಕವಿತೆಗಳು ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಿ ಪರಿಹಾರವನ್ನೂ ಸೂಚಿಸಬೇಕು. ಕವಿಗೆ ಪದಗಳನ್ನು ಮುರಿದು ಕಟ್ಟುವ ಕಲೆ ತಿಳಿಯಬೇಕು’ ಎಂದರು.
ಪುರಸಭೆ ಸದಸ್ಯ ಕೃಷ್ಣಪ್ಪ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಪ್ರಭಾರ ಅಧ್ಯಕ್ಷ ಹರ್ಷ ಪಣ್ಣೆದೊಡ್ಡಿ ಕವಿಗೋಷ್ಠಿ ಉದ್ಘಾಟಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು, ಪ್ರಧಾನ ಕಾರ್ಯದರ್ಶಿ ಸಿ. ಸ್ವಾಮಿಗೌಡ, ಮಾಜಿ ಅಧ್ಯಕ್ಷರಾದ ಎಂ.ಬಿ. ಕುಮಾರ್, ಪುರುಷೋತ್ತಮ, ಮಂಡ್ಯ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಲಿಂಗು, ಪಾಂಡವಪುರ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್ ಮೇನಾಗರ, ಸರ್ಕಾರಿ ನೌಕರರ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಶ್ರೀನಿವಾಸ್, ಎಚ್.ಟಿ. ರಾಜಶೇಖರ್, ಕೆ.ಬಿ. ಬಸವರಾಜು, ಉಮಾಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.