ಶಿವಮೊಗ್ಗ: ಮೈಸೂರಿನ ಪ್ರತಿಬಿಂಬದಂತೆ ತೋರುವ ಶಿವಮೊಗ್ಗದ ದಸರಾ ಜಂಬೂ ಸವಾರಿ, ವಿಜಯದಶಮಿಯ ದಿನವಾರ ಗುರುವಾರ ಅದ್ದೂರಿಯಾಗಿ ನೆರವೇರಿತು.
ಆಗಾಗ ಸುರಿದ ಜೋರು ಮಳೆ ಜಂಬೂ ಸವಾರಿಯಲ್ಲಿ ಪಾಲ್ಗೊಂಡವರ ಹಾಗೂ ಆನೆ ‘ಸಾಗರ’ನ ಮೇಲೆ ವಿರಾಜಮಾನಳಾಗಿದ್ದ ತಾಯಿ ಚಾಮುಂಡೇಶ್ವರಿಯ ಪುತ್ಥಳಿಯ ಸೊಬಗನ್ನು ಕಣ್ತುಂಬಿಕೊಳ್ಳುವ ಉತ್ಸಾಹಕ್ಕೆ ಅಡ್ಡಿಯಾಗಲಿಲ್ಲ.
ಮಧ್ಯಾಹ್ನ 2.30ಕ್ಕೆ ಜಂಬೂ ಸವಾರಿ ಹೊರಡಬೇಕಿತ್ತು. ಆದರೆ ಮಳೆಯ ಕಾರಣ ಕೊಂಚ ತಡವಾಗಿ 3 ಗಂಟೆಗೆ ಆರಂಭವಾಯಿತು. ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಮುಂಭಾಗ ನಂದಿ ಪೂಜೆಯ ನಂತರ 650 ಕೆ.ಜಿ ತೂಕದ ಬೆಳ್ಳಿಯ ಮಂಟಪ ಹಾಗೂ ಚಾಮುಂಡೇಶ್ವರಿಯ ಪುತ್ಥಳಿಯನ್ನು ಬೃಹತ್ ಕ್ರೇನ್ ಬಳಸಿ ಆನೆಯ ಬೆನ್ನಿನ ಮೇಲೆ ಪ್ರತಿಷ್ಠಾಪಿಸಿ ಮೆರವಣಿಗೆಗೆ ಮುನ್ನುಡಿ ಬರೆಯಲಾಯಿತು.
ನಂತರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿನ ಕಮಾನು ಪಕ್ಕದ ಅಟ್ಟಣಿಗೆಯ ಮೇಲೆ ನಿಂತು ಅಂಬಾರಿ ಮೇಲಿದ್ದ ಚಾಮುಂಡೇಶ್ವರಿ ದೇವಿಗೆ ಸಚಿವ ಮಧು ಬಂಗಾರಪ್ಪ ಹೂವು ಅರ್ಪಿಸಿ ಜಿಲ್ಲೆಯ ಜನರ ಪರವಾಗಿ ಗೌರವ ಸಮರ್ಪಿಸಿದರು. ಈ ವೇಳೆ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಕೂಡಾ ಕೈ ಜೋಡಿಸಿದರು.
ಮಂಗಳವಾದ್ಯದ ಸದ್ದು ಹಾಗೂ ಕಲಾ ತಂಡಗಳ ನೇತೃತ್ವದಲ್ಲಿ ಹೊರಟ ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಆನೆ ‘ಸಾಗರ’ನೊಂದಿಗೆ ಗೆಳೆಯರಾದ ಬಹದ್ದೂರ್ ಹಾಗೂ ಬಾಲಣ್ಣ ಹೆಜ್ಜೆ ಹಾಕಿದರು. ಕಲಾವಿದ ಜೀವನ್ ಕೈಚಳಕ ಆನೆಗಳಿಗೆ ವಿಶೇಷ ಮೆರುಗು ನೀಡಿತ್ತು. ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಶಿವಮೊಗ್ಗದ ವಿವಿಧ ದೇವಸ್ಥಾನಗಳಿಂದ ಹೊರಡಿಸಲಾದ ಉತ್ಸವ ಮೂರ್ತಿಗಳು ಸಾಗಿ ಬಂದವು.
ಮೆರವಣಿಗೆ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ, ಸೀನಪ್ಪ ಶೆಟ್ಟಿ ಸರ್ಕಲ್, ದುರ್ಗಿಗುಡಿ, ಜೈಲು ಸರ್ಕಲ್ ಮಾರ್ಗವಾಗಿ ಅಲ್ಲಮಪ್ರಭು ಬಯಲನ್ನು (ಫ್ರೀಡಂ ಪಾರ್ಕ್) ರಾತ್ರಿ ತಲುಪಿತು.
ಕೋಟು–ಪಂಚೆ ಧರಿಸಿ ಮಲೆನಾಡಿನ ಸಾಂಪ್ರದಾಯಿಕ ದಿರಿಸಿನಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಶಿವಮೊಗ್ಗ ತಹಶೀಲ್ದಾರ್ ವಿ.ಎಸ್.ರಾಜೀವ್ ಅವರು ಸಂಪ್ರದಾಯದಂತೆ ಅಲ್ಲಮಪ್ರಭು ಮೈದಾನದಲ್ಲಿ ರಾತ್ರಿ ಅಂಬು ಛೇದನ ಮಾಡಿದರು. ನಂತರ ರಾವಣ ಪ್ರತಿಕೃತಿ ದಹನದೊಂದಿಗೆ ದಸರಾ ಆಚರಣೆ ವಿಧ್ಯುಕ್ತವಾಗಿ ಕೊನೆಗೊಂಡಿತು. ಈ ವೇಳೆ ಸಿಡಿಮದ್ದುಗಳು ಆಕಾಶದಲ್ಲಿ ಜಗಮಗಿಸಿದವು. ಸಾವಿರಾರು ಸಂಖ್ಯೆಯಲ್ಲಿ ನೆರೆದ ಶಿವಮೊಗ್ಗದ ಜನರು ವಿಜಯದಶಮಿಯ ವೈಭವ ಕಣ್ತುಂಬಿಕೊಂಡರು. ಬನ್ನಿ ವಿನಿಮಯದ ಮೂಲಕ ಬಂಗಾರದಂತಹ ಬದುಕನ್ನು ಮುನ್ನೆಲೆಯಾಗಿಸುವ ಸಂಕಲ್ಪ ಮಾಡಿದರು.
ಮೆರವಣಿಗೆಯಲ್ಲಿ ನಂದಿ ಕುಣಿತ, ವೀರಗಾಸೆ, ಕೀಲು ಕುದುರೆ, ಡೊಳ್ಳು ಕುಣಿತ, ಗೊಂಬೆ ಕುಣಿತ, ತಟ್ಟಿರಾಯ ಕಲಾ ತಂಡಗಳು ಭಾಗಿಯಾಗಿದ್ದವು. ಹುಲಿ ವೇಷಧಾರಿಗಳ ಕುಣಿತ ಮೆರವಣಿಗೆಗೆ ವಿಶೇಷ ಕಳೆ ತಂದಿತ್ತು. ಹುಲಿಯ ಪ್ರತಿಕೃತಿ ಹೊಂದಿದ್ದ ಅರಣ್ಯ ಇಲಾಖೆ ಶಿವಮೊಗ್ಗ ವನ್ಯಜೀವಿ ವಿಭಾಗದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಗಮನ ಸೆಳೆಯಿತು. ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ನೇತೃತ್ವದಲ್ಲಿ ಆನೆಗಳನ್ನು ಮೆರವಣಿಗೆಗೆ ಸಿದ್ಧಗೊಳಿಸಲಾಗಿತ್ತು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಪರಿಶಿಷ್ಟ ಜಾತಿ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಎಚ್.ಎಂ.ಚಂದ್ರಶೇಖರಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಸುಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಸಿಇಒ ಎನ್.ಹೇಮಂತ್, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಚಾಮುಂಡೇಶ್ವರಿಗೆ ಹೂ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.