ADVERTISEMENT

ಮಂಡ್ಯ| ಡಿಸಿಸಿ ಬ್ಯಾಂಕ್‌ ಚುನಾವಣೆ: ಮತಗಳು ಮಾರಾಟಕ್ಕಿವೆ!

ಕೋವಿಡ್‌ ನಡುವೆಯೂ ಚುನಾವಣೆಯ ಅಬ್ಬರ; ಮುಂಗಡವಾಗಿ ತಲಾ ₹ 1 ಲಕ್ಷ ವಿತರಣೆ?

ಎಂ.ಎನ್.ಯೋಗೇಶ್‌
Published 27 ಅಕ್ಟೋಬರ್ 2020, 19:30 IST
Last Updated 27 ಅಕ್ಟೋಬರ್ 2020, 19:30 IST
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಕಟ್ಟಡ
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಕಟ್ಟಡ   

ಮಂಡ್ಯ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿಬಿ) ಆಡಳಿತ ಮಂಡಳಿ ಚುನಾವಣಾ ಕಣದಲ್ಲಿ ಹಣದ ಅಬ್ಬರ ಜೋರಾಗಿದೆ. ಜಿದ್ದಾಜಿದ್ದಿಗೆ ಬಿದ್ದಿರುವ ಅಭ್ಯರ್ಥಿಗಳು ಕೋವಿಡ್‌ ಸಂಕಷ್ಟದ ನಡುವೆಯೂ ಹಣ ಚೆಲ್ಲುತ್ತಿದ್ದಾರೆ. ಕೆಲವರು ಮುಂಗಡವಾಗಿ ಪ್ರತಿ ಮತದಾರನಿಗೆ ತಲಾ ₹ 1 ಲಕ್ಷ ವಿತರಣೆ ಮಾಡಿದ್ದಾರೆ ಎಂಬ ಸುದ್ದಿ ಕುತೂಹಲ ಮೂಡಿಸಿದೆ.

ನವೆಂಬರ್‌ 5 ರಂದು ನಡೆಯುವ ಚುನಾವಣೆಗೆ ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಬೆಂಬಲಿಗರ ಜೊತೆಗೂಡಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆಗೂ ಕಡಿಮೆ ಇಲ್ಲ ಎಂಬಂತೆ ಜಿದ್ದಾಜಿದ್ದನ ವಾತಾವರಣ ಸೃಷ್ಟಿಯಾಗಿದೆ. ಇಲ್ಲಿಯವರೆಗೆ 31 ಅಭ್ಯರ್ಥಿಗಳು 36 ನಾಮಪತ್ರ ಸಲ್ಲಿಸಿದ್ದಾರೆ.

ಬುಧವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅ.29 ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಅ.30ರಂದು ನಾಮಪತ್ರ ವಾಪಸ್‌ ಪಡೆಯಲು ಅಂತಿಮ ದಿನವಾಗಿದೆ. ಬಹುತೇಕ ಮಾಜಿ ಅಧ್ಯಕ್ಷರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಕಣದಲ್ಲಿದ್ದು ವಿವಿಧ ತಂತ್ರಗಳ ಮೂಲಕ ಜಿಲ್ಲೆಯ ವಿವಿಧ ಸಹಕಾರ ಸಂಘಗಳನ್ನು ಪ್ರತಿನಿಧಿಸುವ ಮತದಾರರ ಗಮನ ಸೆಳೆಯುತ್ತಿದ್ದಾರೆ.

ADVERTISEMENT

ಪ್ರಾಥಮಿಕ ಹಂತದಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಮುಂಗಡವಾಗಿ ತಲಾ ₹ ಒಂದು ಲಕ್ಷ ವಿತರಣೆ ಸೇರಿದಂತೆ ಚಿನ್ನದ ಉಂಗುರ, ಬೆಳ್ಳಿ ವಸ್ತುಗಳನ್ನು ಮತದಾರರ ಮನೆಮನೆಗೆ ತೆರಳಿ ವಿತರಣೆ ಮಾಡುತ್ತಿದ್ದಾರೆ. ಅಂತಿಮವಾಗಿ ಕಣದಲ್ಲಿ ಉಳಿಯುವವರ ಪಟ್ಟಿ ಸಿದ್ಧಗೊಂಡ ನಂತರ ಇತರ ಅಭ್ಯರ್ಥಿಗಳು ವಿತರಿಸುವ ಮೊತ್ತಕ್ಕೆ ಅನುಗುಣವಾಗಿ ಎಲ್ಲರೂ ಮತ್ತಷ್ಟು ಹಣ ಹಂಚಲಿದ್ದಾರೆ. ಹಣ ಹಂಚಲು ಪೈಪೋಟಿ ನಡೆಸುತ್ತಿದ್ದು ಪ್ರತಿ ಮತದಾರರಿಗೆ ತಲಾ ₹ 5 ಲಕ್ಷದವರೆಗೆ ಹಣ ಹಂಚಲು ಸಿದ್ಧರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಾಡ್‌ಡೌನ್‌ ಅನ್‌ಲಾಕ್‌ ಆದನಂತರ ನಗರದ ಹೋಟೆಲ್‌ಗಳು, ಬಾರ್‌ಗಳು ತೆರೆದಿವೆ. ಇದನ್ನೇ ಸದುಪಯೋಗ ಮಾಡಿಕೊಂಡ ಅಭ್ಯರ್ಥಿಗಳು ಮತದಾರರಿಗೆ ಪ್ರತಿನಿತ್ಯ ಭರ್ಜರಿ ಬಾಡೂಟ ಆಯೋಜನೆ ಮಾಡುವುದು ಸಾಮಾನ್ಯವಾಗಿದೆ. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕ್ಲಬ್‌, ತೋಟದ ಮನೆಗಳಲ್ಲೂ ಹಣ, ಬಾಡು, ಮದ್ಯದ ಪಾರ್ಟಿ ಆಯೋಜನೆ ಮಾಡಲಾಗುತ್ತಿದೆ. ಆ ಮೂಲಕ ಮತಗಳನ್ನು ಗಟ್ಟಿಮಾಡಿಕೊಳ್ಳುವಲ್ಲಿ ಅಭ್ಯರ್ಥಿಗಳು ತೊಡಗಿದ್ದಾರೆ.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹುದ್ದೆಗೇರಲು ವಿವಿಧ ಪಕ್ಷಗಳ ಹಿರಿಯ ಮುಖಂಡರ ನಡುವೆ ಪೈಪೋಟಿ ಎದುರಾಗಿದೆ.ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷರೂ ಆಗಿರುವ ಸಾತನೂರು ಸತೀಶ್‌, ಅಮರಾವತಿ ಅಶ್ವಥ್‌ ನಡುವೆ ಪೈಪೋಟಿ ಇದೆ. ಬಳಕೆದಾರರ ಸಂಘದಿಂದ ಎ.ಬಸವರಾಜು, ಸಿಟಿ ಕೋ ಆಪರೇಟಿಸ್‌ ಸಹಕಾರ ಸಂಘದ ಅಧ್ಯಕ್ಷ, ಕಾಂಗ್ರೆಸ್‌ನ ಹಾಲಹಳ್ಳಿ ಅಶೋಕ್‌, ಕಾಡೇನಹಳ್ಳಿ ರಾಮಚಂದ್ರ ಮುಂತಾದವರ ಕಣದಲ್ಲಿ ಇದ್ದಾರೆ.

12 ಸ್ಥಾನಗಳಿಗೆ ಚುನಾವಣೆ: ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಯಲ್ಲಿ 16 ಸದಸ್ಯರಿದ್ದು ಜಿಲ್ಲೆಯ ವಿವಿಧ ಸಹಕಾರ ಸಂಘಗಳಿಂದ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಏಳು ತಾಲ್ಲೂಕುಗಳ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಆಯ್ಕೆಯಾದ 7 ಸ್ಥಾನ, ಹಾಲು ಉತ್ಪಾದಕರ ಸಹಕಾರ ಸಂಘ (ಮಂಡ್ಯ ಮತ್ತು ಪಾಂಡವಪುರ ಉಪ ವಿಭಾಗ)ದಿಂದ ಇಬ್ಬರು, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಘಗಳಿಂದ ಒಬ್ಬರು, ಬಳಕೆದಾರರ ಸಹಕಾರ ಸಂಘಗಳಿಂದ ಒಬ್ಬರು, ಟಿಎಪಿಸಿಎಂಎಸ್‌ನಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಉಳಿದ 4 ಸ್ಥಾನಗಳಲ್ಲಿ ಅಧಿಕಾರಿಗಳಿರುತ್ತಾರೆ.

ಒಟ್ಟು 1,81 ಮತಗಳಿವೆ, ಆದರೆ ಮತ ಚಲಾವಣೆಗೆ ಇಲ್ಲಿಯವರಗೆ 875 ಮಂದಿ ಅರ್ಹತೆ ಪಡೆದಿದ್ದಾರೆ. ಉಳಿದವರು ಹೈಕೋರ್ಟ್‌ಗೆ ತೆರಳಿ ಮತದಾನ ಹಕ್ಕುಪಡೆಯಲು ಯತ್ನಿಸುತ್ತಿದ್ದಾರೆ.

ಮೂಡದ ಒಮ್ಮತ: ಕಾಂಗ್ರೆಸ್‌ ಮುಖಂಡರಿಗೆ ತಲೆನೋವು

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡರಿಂದ ತಲೇನೋವಾಗಿದೆ. ಅಭ್ಯರ್ಥಿ ಆಯ್ಕೆಗಾಗಿ ನಡೆದ ಹಲವು ಸಭೆಗಳು ವಿಫಲವಾಗಿದ್ದು ಮುಖಂಡರು ಕೈಚೆಲ್ಲಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ಅಮರಾವತಿ ಚಂದ್ರಶೇಖರ್‌ ಹಾಗೂ ಸಾತನೂರು ಸತೀಶ್‌ ಅವರ ನಡುವೆಯೇ ಸ್ಪರ್ಧೆ ಏರ್ಪಟ್ಟಿರುವುದು ಕುತೂಹಲ ಮೂಡಿಸಿದೆ.

‘ಒಮ್ಮತ ಮೂಡಿಸಲು ಇನ್ನೂ ಅವಕಾಶ ಇದ್ದು ನ.3ರವರೆಗೂ ಕಣದಿಂದ ನಿವೃತ್ತಿ ಪಡೆಯಬಹುದು. ನಮ್ಮ ಪ್ರಯತ್ನ ಮುಂದುವರಿದಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ‌ ಹೇಳಿದರು.

ಎಂದೂ ಇಲ್ಲದ ಅಬ್ಬರ ಈ ಬಾರಿ ಇರುವುದನ್ನು ನೋಡಿದರೆ ಚುನಾವಣೆಗೆ ಸ್ಪರ್ಧಿಸಿ ತಪ್ಪು ಮಾಡಿದ್ದೇನೆ ಎಂದೆನಿಸುತ್ತಿದೆ. ಇದು ನನ್ನ ಕಡೆಯ ಯತ್ನವಾಗಿದ್ದು ಇನ್ನೆಂದೂ ಸ್ಪರ್ಧಿಸುವುದಿಲ್ಲ

–ಸಾತನೂರು ಸತೀಶ್‌, ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.