ADVERTISEMENT

ಶ್ರೀರಂಗಪಟ್ಟಣ: ಮದಕರಿನಾಯಕ ಸ್ಮಾರಕ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಮೇ 2025, 12:37 IST
Last Updated 15 ಮೇ 2025, 12:37 IST
ಶ್ರೀರಂಗಪಟ್ಟಣದಲ್ಲಿ ಸೋಮವಾರ ನಡೆದ ಚಿತ್ರದುರ್ಗದ ಮದಕರಿ ನಾಯಕ ಅವರ ಪುಣ್ಯ ಸ್ಮರಣೆ ನಿಮಿತ್ತ ಅವರ ಭಾವಚಿತ್ರವನ್ನು ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಪಶ್ಚಿಮವಾಹಿನಿವರೆಗೆ ಮೆರವಣಿಗೆ ಮಾಡಲಾಯಿತು
ಶ್ರೀರಂಗಪಟ್ಟಣದಲ್ಲಿ ಸೋಮವಾರ ನಡೆದ ಚಿತ್ರದುರ್ಗದ ಮದಕರಿ ನಾಯಕ ಅವರ ಪುಣ್ಯ ಸ್ಮರಣೆ ನಿಮಿತ್ತ ಅವರ ಭಾವಚಿತ್ರವನ್ನು ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಪಶ್ಚಿಮವಾಹಿನಿವರೆಗೆ ಮೆರವಣಿಗೆ ಮಾಡಲಾಯಿತು   

ಶ್ರೀರಂಗಪಟ್ಟಣ: ಪಟ್ಟಣದ ಸೆರೆಮನೆಯಲ್ಲಿ ಕೊನೆಯುಸಿರೆಳೆದ ಚಿತ್ರದುರ್ಗದ ಪಾಳೇಗಾರ ಮದಕರಿನಾಯಕ ಅವರ ಸ್ಮಾರಕವನ್ನು ಪಶ್ಚಿಮವಾಹಿನಿ ಬಳಿ ನಿರ್ಮಿಸಬೇಕು ಎಂದು ಚಿಕ್ಕಬಳ್ಳಾಪುರದ ಅಭಿನವ ಹಾಲಶ್ರೀ ಸ್ವಾಮೀಜಿ ಆಗ್ರಹಿಸಿದರು.

ಪಟ್ಟಣದಲ್ಲಿ ಗುರುವಾರ ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಮದಕರಿನಾಯಕ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೀರತನಕ್ಕೆ ಹೆಸರಾದ ಮದಕರಿನಾಯಕನನ್ನು ಹೈದರ್ ಮತ್ತು ಟಿಪ್ಪು ಸುಲ್ತಾನ್‌ ಬಂಧಿಸಿ ಇಲ್ಲಿನ ಸೆರೆಯಲ್ಲಿಟ್ಟಿದ್ದರು. ಮದಕರಿನಾಯಕ ಇಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಹಾಗಾಗಿ ಆತನ ಹೆಸರಿನಲ್ಲಿ ಸ್ಮಾರಕ ನಿರ್ಮಿಸಬೇಕು. ಆತನ ಬಂಧನ, ನಿಗೂಢ ಸಾವು ಮತ್ತು ಅಂತ್ಯಕ್ರಿಯೆ ನಡೆದ ಬಗ್ಗೆ ಸರ್ಕಾರ ಸಂಶೋಧನೆ ನಡೆಸಿ ನೈಜ ಘಟನೆಗಳನ್ನು ಜನರಿಗೆ ತಿಳಿಸಬೇಕು’ ಎಂದು ಹೇಳಿದರು.

ADVERTISEMENT

ಹಿಂದೂ ಜಾಗರಣಾ ವೇದಿಕೆ ಮುಖಂಡ ಕೆ. ಚಂದನ್‌ ಮಾತನಾಡಿ, ‘ಮದಕರಿನಾಯಕ ಇದೇ ಊರಿನ ಕೋಟೆಗೆ ಹೊಂದಿಕೊಂಡ ಸೆರೆಮನೆಯೊಂದರಲ್ಲಿ ಬಂಧನದಲ್ಲಿದ್ದಾಗ ಮೃತಪಟ್ಟಿದ್ದಾನೆ ಎಂದು ಆತನ ವಂಶಸ್ಥರು ಹೇಳುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಸತ್ಯ ಶೋಧನೆ ನಡೆಯಬೇಕು’ ಎಂದರು.

ಮೈಸೂರಿನ ವಕೀಲ ದೇವರಾಜ್‌ ಪಾಳೇಗಾರ್‌ ಮಾತನಾಡಿ, ‘ಮದಕರಿನಾಯಕನ ಸಾವಿನ ಪ್ರಕರಣದ ಬಗ್ಗೆ ಸತ್ಯಾಂಶ ತಿಳಿಯಲು ತಜ್ಞರ ಸಮಿತಿ ರಚಿಸಬೇಕು. ಈ ಸಂಬಂಧ ಪ್ರಧಾನಿಗೆ ಪತ್ರ ಬರೆಯಲಾಗುವುದು’ ಎಂದು ಹೇಳಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಪಾಶ್ಚಿಮವಾಹಿನಿ ವರೆಗೆ ಮದಕರಿನಾಯಕ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಪುರಸಭೆ ಅಧ್ಯಕ್ಷ ಎಂ.ಎಲ್‌. ದಿನೇಶ್ ಮೆರವಣಿಗೆಗೆ ಚಾಲನೆ ನೀಡಿದರು. ಪುರಸಭೆ ಸದಸ್ಯರಾದ ಎಂ. ಶ್ರೀನಿವಾಸ್, ಎಸ್‌.ಟಿ. ರಾಜು, ಕೃಷ್ಣ‍ಪ್ಪ ಭಜರಂಗ ಸೇನೆ ಮುಖಂಡ ಬಿ. ಮಂಜುನಾಥ್, ದೇವೇಗೌಡ, ಜೀನಧಾರೆ ಟ್ರಸ್ಟ್‌ ಅಧ್ಯಕ್ಷ ನಟರಾಜ್‌, ಯಜಮಾನ್‌ ರಂಗಸ್ವಾಮಿ ನಾಯಕ, ಪೈ.ರಂಗಸ್ವಾಮಿ, ಶೇಖರ್‌, ತುಮಕೂರಿನ ಮಂಜು ಭಾರ್ಗವ್‌, ಧನುಷ್‌, ಮಾರಣ್ಣ ಪಾಳೇಗಾರ್‌, ಚನ್ನಪಟ್ಟಣದ ಆಜಾದ್ ಬ್ರಿಗೇಡ್‌ನ ಸುರೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.