ADVERTISEMENT

ವಿವಿಧ ಬೇಡಿಕೆಗಳಿಗೆ ಆಗ್ರಹ: ಸಿಎಂ ಮನೆಗೆ ಪಾದಯಾತ್ರೆ

ಅಂಗವಿಕಲರ ಪುನರ್‌ ವಸತಿ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 14:30 IST
Last Updated 21 ಏಪ್ರಿಲ್ 2025, 14:30 IST
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನವ ಕರ್ನಾಟಕ ಅಂಗವಿಕಲರ ಗ್ರಾಮೀಣ, ವಿವಿಧೋದ್ದೇಶ ಹಾಗೂ ನಗರ ಪುನರ್‌ ವಸತಿ ಪುನರ್‌ ವಸತಿ ಕಾರ್ಯಕರ್ತರು  ಶ್ರೀರಂಗಪಟ್ಟಣದಿಂದ ಮೈಸೂರಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದವರೆಗೆ ಸೋಮವಾರ ಪಾದಯಾತ್ರೆ ಆರಂಭಿಸಿದರು
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನವ ಕರ್ನಾಟಕ ಅಂಗವಿಕಲರ ಗ್ರಾಮೀಣ, ವಿವಿಧೋದ್ದೇಶ ಹಾಗೂ ನಗರ ಪುನರ್‌ ವಸತಿ ಪುನರ್‌ ವಸತಿ ಕಾರ್ಯಕರ್ತರು  ಶ್ರೀರಂಗಪಟ್ಟಣದಿಂದ ಮೈಸೂರಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದವರೆಗೆ ಸೋಮವಾರ ಪಾದಯಾತ್ರೆ ಆರಂಭಿಸಿದರು   

ಶ್ರೀರಂಗಪಟ್ಟಣ: ಸೇವೆ ಕಾಯಂ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವ ಕರ್ನಾಟಕ ಅಂಗವಿಕಲರ ಗ್ರಾಮೀಣ ಪುನರ್‌ ವಸತಿ ಕಾರ್ಯಕರ್ತರು, ವಿವಿಧೋದ್ದೇಶ ಪುನರ್‌ ವಸತಿ ಕಾರ್ಯಕರ್ತರು ಹಾಗೂ ನಗರ ಪುನರ್‌ ವಸತಿ ಕಾರ್ಯಕರ್ತರು ಪಟ್ಟಣದಿಂದ ಮೈಸೂರಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದವರೆಗೆ ಸೋಮವಾರ ಪಾದಯಾತ್ರೆ ಆರಂಭಿಸಿದರು.

ಇಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಪಾದಯಾತ್ರೆ ಆರಂಭವಾಯಿತು. ರಾಜ್ಯ ವಿವಿಧ ಜಿಲ್ಲೆಗಳ ನೂರಾರು ಅಂಗವಿಕಲರ ಪುನರ್‌ ವಸತಿ ಕಾರ್ಯಕರ್ತರು ಮಿನಿ ವಿಧಾನಸೌಧ, ಚೆಕ್‌ ಪೋಸ್ಟ್‌, ನಗುವನಹಳ್ಳಿ ಗೇಟ್‌ ಮಾರ್ಗವಾಗಿ ಮೈಸೂರು ಕಡೆಗೆ ಹೆಜ್ಜೆ ಹಾಕಿದರು. ಉರಿ ಬಿಸಿಲನ್ನೂ ಲೆಕ್ಕಿಸದೆ ಊರುಗೋಲು, ತ್ರಿಚಕ್ರ ವಾಹನ ಸಹಿತ ಮುನ್ನಡೆದರು. ಕೆಲವರು ಡಾಂಬರು ರಸ್ತೆಯಲ್ಲಿ ತೆವಳುತ್ತಲೇ ಸಾಗಿದರು. ಅಂಗವಿಕಲರು ಹೀಗೆ ಸಾಗುತ್ತಿದ್ದ ದೃಶ್ಯ ನೋಡುಗರ ಮನ ಕಲಕುವಂತೆ ಮಾಡಿತು.

‘ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಡಿಯಲ್ಲಿ ರಾಜ್ಯದಲ್ಲಿ 6,860 ಮಂದಿ ಗ್ರಾಮೀಣ ಪುನರ್‌ ವಸತಿ ಕಾರ್ಯಕರ್ತರು, ವಿವಿಧೋದ್ದೇಶ ಪುನರ್‌ ವಸತಿ ಕಾರ್ಯಕರ್ತರು ಹಾಗೂ ನಗರ ಪುನರ್‌ ವಸತಿ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದೇವೆ. 18 ವರ್ಷಗಳ ಹಿಂದೆ ತಿಂಗಳಿಗೆ ₹ 750 ಗೌರವ ಧನದಿಂದ ಸೇವೆ ಆರಂಭಿಸಿದ್ದು, ಪ್ರಸ್ತುತ ₹ 9000 ಗೌರವ ಧನ ನೀಡಲಾಗುತ್ತಿದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಅಂಗವಿಕಲರು ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಜೀವನ ನಡೆಸುವುದು ದುಸ್ತರವಾಗಿದೆ. ನಮ್ಮ ಸೇವೆಯನ್ನು ಕನಿಷ್ಠ ವೇತನ ಕಾಯಿದೆಗೆ ಒಳಪಡಿಸಿ ಕಾಯಂ ಮಾಡಬೇಕು’ ಎಂದು ಸಂಘಟನೆಯ ಮುಖಂಡ ಜೆ. ದೇವರಾಜು ಆಗ್ರಹಿಸಿದರು.

ADVERTISEMENT

‘ಅಂಗವಿಕಲರ ಪುನರ್‌ ವಸತಿ ಕಾರ್ಯಕರ್ತರ ಸೇವೆಯನ್ನು ಕಾಯಂ ಮಾಡಿ ಸೇವಾ ಭದ್ರತೆ ಕಲ್ಪಿಸಬೇಕು. ಇ– ಹಾಜರಾತಿ ಮತ್ತು ಕರ್ತವ್ಯಕ್ಕೆ 8 ಗಂಟೆಗಳ ಸಮಯ ನಿಗದಿಪಡಿಸಬೇಕು. ಮಹಿಳಾ ಕಾರ್ಯಕರ್ತರಿಗೆ 180 ದಿನಗಳ ವೇತನ ಸಹಿತ ರಜೆ ಸೌಲಭ್ಯ ದೊರೆಯುವಂತಾಗಬೇಕು. ಸಾರಿಗೆ ಭತ್ಯೆ ಹಾಗೂ ಮರಣ ಪರಿಹಾರ ನಿಧಿ ನೀಡಬೇಕು’ ಎಂದು ಗ್ರಾಮೀಣ ಅಂಗವಿಕಲರ ಪುನರ್‌ ವಸತಿ ಕಾರ್ಯಕರ್ತ ಬೋರೇಗೌಡ ಒತ್ತಾಯಿಸಿದರು.

ಎನ್‌.ಪಿ. ಸುಧೀರ್‌, ಮಹದೇವು, ಸುಬ್ರಹ್ಮಣ್ಯ, ಬಸವರಾಜ, ಮರಳಾಗಾಲ ಮಂಜುನಾಥ್, ಎಸ್‌. ಕೃಷ್ಣಪ್ಪ, ಪಾಂಡು ಲಮಾಣಿ, ಮಂಜುಳಾ, ಶೈಲಜಾ, ಹರೀಶ್, ಶ್ರೀನಿವಾಸ್, ನಾಗರಾಜ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಮಂದಿ ಅಂಗವಿಕಲರ ಪುನರ್‌ ವಸತಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.