ಕೆ.ಆರ್.ಪೇಟೆ: ‘ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಡೆದ ದಲಿತ ರೈತನ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಪಟ್ಟಣದಲ್ಲಿ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ, ತಮಟೆ ಚಳವಳಿ, ಮತ್ತು ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಸಭೆ ನಡೆಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿ ಮಿನಿ ವಿಧಾನಸೌಧದ ಮುಂದೆ ಜಮಾವಣೆಗೊಂಡು ಸಭೆ ನಡೆಯಿತು.
ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಕತ್ತರಘಟ್ಟ ಗ್ರಾಮದಲ್ಲಿ ನಡೆದ ಕೃತ್ಯ ಮಾನವೀಯತೆಗೆ ಬಗೆದ ದ್ರೋಹವಾಗಿದೆ. ಇಂತಹ ದೊಡ್ಡ ದುರಂತ ನಡೆದಿದ್ದರೂ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಿ ತನಿಖೆ ನಡೆಸಿ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಲು ಮುಂದಾಗಿಲ್ಲ. ಕೊಲೆ ನಡೆದಿರುವ ಲಕ್ಷಣಗಳಿದ್ದರೂ ಕೇಸನ್ನು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ನಡೆಸಿರುವುದು ನಾಚಿಕೆಗೇಡು’ ಎಂದು ದೂರಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ‘ಇದೊಂದು ಪೂರ್ವ ಯೋಜಿತ ಕೃತ್ಯವಾಗಿದೆ. ಜಮೀನನ್ನು ಕಬಳಿಸುವ ಹುನ್ನಾರದಿಂದ ಬೆದರಿಸಿ ಕೊಲೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ’ ಎಂದರು.
ಬಿ.ಎಸ್.ಪಿ. ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿದರು. ದಲಿತ ಮುಖಂಡರಾದ ಡಿ. ಪ್ರೇಮಕುಮಾರ್, ಬಸ್ತಿ ರಂಗಪ್ಪ, ಸೋಮಸುಂದರ್, ರಾಜಯ್ಯ, ಮಾಂಬಳ್ಳಿ ಜಯರಾಮ್, ಲಕ್ಷ್ಮೀಪುರ ರಂಗಸ್ವಾಮಿ, ಬಂಡಿಹೊಳೆ ರಮೇಶ್, ಬಸ್ತಿ ರಂಗಪ್ಪ, ಚಿ. ರಾಜಯ್ಯ, ಕೊಟಗಾನಹಳ್ಳಿ ರಾಮಯ್ಯ, ಡಿ.ಪ್ರೇಮಕುಮಾರ್, ಸೋಮಸುಂದರ್, ಊಚನಹಳ್ಳಿ ನಟರಾಜ್, ವೆಂಕಟಗಿರಿ, ಕತ್ತರಘಟ್ಟ ರಾಜೇಶ್, ತೆಂಡೇಕೆರೆ ನಿಂಗಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.