ಮಂಡ್ಯ: ‘ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರವಿದೆ ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಸರ್ಕಾರ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ತಮಟೆ ಚಳವಳಿ ನಡೆಸಿದರು.
ನಗರದ ಸರ್ ಎಂ.ವಿ.ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ‘ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ. ರಾಜ್ಯ ಸರ್ಕಾರ ತಕ್ಷಣ ಅನುಷ್ಠಾನಗೊಳಿಸಬೇಕು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅ ಜನ್ಮದಿನ ಜೂ.9ರಂದು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು. ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ’ಎಂದು ಒತ್ತಾಯಿಸಿದರು.
‘ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಒಳಮೀಸಲಾತಿ ಜಾರಿ ವರೆಗೆ ಹೊಸ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು. ಬಗರ್‌ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು. ಕೃಷಿ ಕಾರ್ಮಿಕರನ್ನು ದೌರ್ಜನ್ಯದಿಂದ ಒಕ್ಕಲೆಬ್ಬಿಸುತ್ತಿದ್ದು, ಪರ್ಯಾಯ ಭೂಮಿ ನೀಡಬೇಕು’ ಎಂದು ಆಗ್ರಹಿಸಿದರು.
‘ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ವಿಭಾಗೀಯ ಸಂಚಾಲಕ ಶಿವರಾಜ್ ಮರಳಿಗ, ಜಿಲ್ಲಾ ಸಂಚಾಲಕ ಮದ್ದೂರು ಶ್ರೀನಿವಾಸ್, ತಾಲ್ಲೂಕು ಸಂಚಾಲಕ ಪ್ರಕಾಶ ನಿಡಘಟ್ಟ, ಮುಖಂಡರಾದ ಶಂಕರ್ ನಿಡಘಟ್ಟ, ಪುಟ್ಟಲಿಂಗಯ್ಯ ಬೂದಗುಪ್ಪೆ, ವೆಂಕಟರಾಮು ನಿಡಘಟ್ಟ, ಗುರುಲಿಂಗಯ್ಯ, ತಮ್ಮೇಶ್, ರಾಚಯ್ಯ, ಮಾದೇಶ, ಸೌಭಾಗ್ಯ, ಮಾದೇವಿ, ಸವಿತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.