ಮಳವಳ್ಳಿ: ‘ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನೂರಾರು ಕೋಟಿ ಅನುದಾನದ ಮೂಲಕ ತಾಲ್ಲೂಕಿನ ಪ್ರಗತಿಗೆ ಶ್ರಮಿಸಲಾಗುತ್ತಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು ₹13 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ರಸ್ತೆ, ಚರಂಡಿ, ಕುಡಿಯುವ ನೀರಿನ ಯೋಜನೆಗಳಿಗೆ ಸಮರ್ಪಕವಾಗಿ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಮುಂದಾಗಿದ್ದೇವೆ. ಈ ಭಾಗದ ಕಿರುಗಾವಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸದ್ಯದಲ್ಲಿಯೇ ಲೋಕಾರ್ಪಣೆಗೊಳಿಸಲಾಗುವುದು. ಈಗಾಗಲೇ ಯೋಜನೆಯನ್ನು ಪ್ರಯೋಗಿಕವಾಗಿ ಚಾಲನೆಗೊಳಿಸಲಾಗಿದೆ’ ಎಂದು ಹೇಳಿದರು.
‘ಹಿಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಭಾಗದ ರಸ್ತೆ ಚರಂಡಿ, ನಾಲೆಗಳ ಅಭಿವೃದ್ಧಿ, ಕುಡಿಯುವ ನೀರು, ವಸತಿ ಸವಲತ್ತು ಸೇರಿದಂತೆ ಮೂಲ ಸೌಕರ್ಯಗಳ ಒದಗಿಸಲು ಒತ್ತು ನೀಡದ ಕಾರಣ ಇದೀಗ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೀಗಾಗಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿವಿಧ ಇಲಾಖೆಗಳ ಮೂಲಕ ನೂರಾರು ಕೋಟಿ ವಿಶೇಷ ಅನುದಾನ ತಂದು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.
‘ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಬಿಡುಗಡೆಗೊಳಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮವಹಿಸುವುದಾಗಿ’ ಭರವಸೆ ನೀಡಿದರು.
ತಾಲ್ಲೂಕಿನ ಹಂಗ್ರಾಪುರ, ಗಣಗನೂರು, ರಾಗಿಬೊಮ್ಮನಹಳ್ಳಿ, ಮಾಗನೂರು, ತಳಗವಾದಿ, ಹುಲ್ಲೇಗಾಲ, ಮುದ್ದೇಗೌಡನದೊಡ್ಡಿ, ಚಿಕ್ಕಮುಲಗೂಡು, ರಾಮಂದೂರು, ದೋರನಹಳ್ಳಿ, ಮಿಕ್ಕೆರೆ, ಕಿರುಗಾವಲು, ದೇಶವಳ್ಳಿ, ಬೆಂಡರವಾಡಿ, ನೇಣನೂರು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಪಟ್ಟಣದ ಪಶುಪಾಲನಾ ವೈದ್ಯಕೀಯ ತರಬೇತಿ ಕೇಂದ್ರಕ್ಕೆ ಹೊಸದಾಗಿ ನಿರ್ಮಿಸಿರುವ ಕೊಠಡಿ ಮತ್ತು ವಸತಿ ನಿಲಯವನ್ನು ಉದ್ಘಾಟಿಸಿದರು.
ಮನ್‌ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಡಿ.ಕೃಷ್ಣೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಜಿ.ಪಂ.ಮಾಜಿ ಸದಸ್ಯೆ ಸುಜಾತಾ ಕೆ.ಎಂ.ಪುಟ್ಟು, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸಿ.ಚೌಡಯ್ಯ, ನಿರ್ದೇಶಕರಾದ ಕೆ.ಜೆ.ದೇವರಾಜು, ಪ್ರಕಾಶ್, ಗ್ರಾ.ಪಂ.ಅಧ್ಯಕ್ಷರಾದ ಗೋವಿಂದ ರಾಜು, ಎನ್.ಸುಮಿತ್ರಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಬೆವಿನಹಟ್ಟಿ, ಲೋಕೋಪಯೋಗಿ ಇಲಾಖೆಯ ಎಇಇ ಸೋಮಶೇಖರ್, ಕಿರುಗಾವಲು ಗ್ರಾ.ಪಂ.ಉಪಾಧ್ಯಕ್ಷ ಮಹದೇವು, ತಳಗವಾದಿ ಗ್ರಾ.ಪಂ.ಸದಸ್ಯರಾದ ಡಿ.ಬಿ.ಬಸವರಾಜು, ಪ್ರಭುಸ್ವಾಮಿ, ಮುಖಂಡರಾದ ಕಾಳಪ್ಪ, ದಿಲೀಪ್ ಕುಮಾರ್(ವಿಶ್ವ) ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.