ಮಂಡ್ಯ: ‘ಗ್ರಂಥಾಲಯಗಳಲ್ಲಿರುವ ಪುಸ್ತಕಗಳನ್ನು ಸಮರ್ಪಕವಾಗಿ ಓದಿ ಸದುಪಯೋಗ ಪಡಿಸಿಕೊಳ್ಳುವವರು ನಿಜವಾಗಿಯೂ ಸಾಧಕರು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ 2025-26ನೇ ಸಾಲಿನ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ 70ನೇ ಆಯವ್ಯಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಎಲ್ಲ ಗ್ರಂಥಾಲಯಗಳು ಸೇರಿ ಒಟ್ಟು 1.88 ಲಕ್ಷ ಪುಸ್ತಕಗಳಿವೆ ಎಂದು ತಿಳಿಸಿದರು.
ಎಲ್ಲ ಗ್ರಂಥಾಲಯಗಳಲ್ಲಿ 14 ಲಕ್ಷ ಜನರು ಡಿಜಿಟಲ್ ಸದಸ್ಯತ್ವ ಕಾರ್ಡ್ ಹೊಂದಿದ್ದರೆ ಹಾಗೂ 53 ಸಾವಿರ ಜನರು ಮ್ಯಾನುವಲ್ ಗ್ರಂಥಾಲಯ ಕಾರ್ಡುಗಳನ್ನು ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.
ಗ್ರಂಥಾಲಯಗಳಿಗೆ ಓದಲು ಬರುವವರಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕಿದೆ. ಗ್ರಂಥಾಲಯಗಳಲ್ಲಿ ಹೆಚ್ಚಿನ ಸಮಯ ಕಳೆಯುವವರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿ ಜೊತೆಗೆ ಗ್ರಂಥಾಲಯಗಳ ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸಿ ಜಿಲ್ಲೆಯಲ್ಲಿ ಓದುಗರ ಸಂಖ್ಯೆ ಹೆಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಳವಳ್ಳಿಯಲ್ಲಿ ನೂತನ ಗ್ರಂಥಾಲಯ ನಿರ್ಮಿಸಲಾಗಿದೆ. ಶ್ರೀರಂಗಪಟ್ಟಣ ಹಾಗೂ ಕೆ.ಆರ್. ಪೇಟೆ ಗಳಲ್ಲಿ ನೂತನ ಗ್ರಂಥಾಲಯ ಸ್ಥಾಪನೆಗೆ ಅನುಮೋದನೆ ದೊರೆತಿದ್ದು ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿದೆ ಎಂದು ತಿಳಿಸಿದರು.
‘ಮಾಸಿಕ ಉತ್ತಮ ಓದುಗ ಅಭಿಯಾನ’ ಮಾಡಿ ಗ್ರಂಥಾಲಯಗಳಲ್ಲಿ ಕಲಿತು ಸಾಧನೆ ಮಾಡಿದವರನ್ನು ಕರೆಸಿ ಸನ್ಮಾನ ಮಾಡಿ ಹಾಗೂ ಮಾಸಿಕವಾಗಿ ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆದು ವ್ಯಾಸಂಗ ಮಾಡುವವರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವ ಮೂಲಕ ಓದುಗರನ್ನು ಉತ್ತೇಜಿಸಿ ಎಂದು ಹೇಳಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಹಾಗೂ ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕ ಕೃಷ್ಣಮೂರ್ತಿ, ಪ್ರಾಧಿಕಾರದ ಸದಸ್ಯರಾದ ಚಂದನ್, ತೈಲೂರು ವೆಂಕಟಕೃಷ್ಣ, ಚಂದ್ರು, ಎಸ್.ಎಸ್ ದಯಾನಂದ, ಲಿಂಗರಾಜುಮೂರ್ತಿ ಎನ್, ಜಿ.ಕೆ ಮಂಜೇಗೌಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.