ADVERTISEMENT

ಅಸ್ಪೃಶ್ಯತೆ ಆಚರಿಸಿದರೆ ಶಿಸ್ತು ಕ್ರಮ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:29 IST
Last Updated 20 ಮೇ 2025, 15:29 IST
ಹಲಗೂರು ಸಮೀಪದ ಅಂತರವಳ್ಳಿ ಗ್ರಾಮದಲ್ಲಿ ನಡೆದ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ ಮಾತನಾಡಿದರು
ಹಲಗೂರು ಸಮೀಪದ ಅಂತರವಳ್ಳಿ ಗ್ರಾಮದಲ್ಲಿ ನಡೆದ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ ಮಾತನಾಡಿದರು   

ಹಲಗೂರು: ಗ್ರಾಮದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಶ್ಪೃಸ್ಯತೆ ಆಚರಣೆಗೆ ಅವಕಾಶ ನೀಡಿದರೇ, ತಪ್ಪಿತಸ್ಥ ಮುಖಂಡರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ ಎಚ್ಚರಿಕೆ ನೀಡಿದರು.

ಸಮೀಪದ ಅಂತರವಳ್ಳಿಯ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಅವರಣದಲ್ಲಿ ಮಂಗಳವಾರ ಸಂಜೆ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮದ ಮುಖಂಡರು ನಿಮ್ಮಲ್ಲಿರುವ ಮನಸ್ತಾಪಗಳನ್ನು ಬಿಟ್ಟು ಹೊರ ಬನ್ನಿ, ಸೌಹಾರ್ದದ ಮೂಲಕ ಇತರೆ ಗ್ರಾಮಗಳಿಗೆ ಮಾದರಿಯಾಗಬೇಕು. ಪಾರಂಪರಿಕ ಹಬ್ಬವನ್ನು ಒಗ್ಗೂಡಿ ಆಚರಿಸಿ’ ಎಂದು ಸಲಹೆ ನೀಡಿದರು.

ADVERTISEMENT

‘ಗ್ರಾಮದಲ್ಲಿ ಪರಿಶಿಷ್ಟ ಸಮುದಾಯವನ್ನು ಬಿಟ್ಟು ಸವರ್ಣೀಯರು ಪ್ರತ್ಯೇಕವಾಗಿ ಪಟ್ಟಲದಮ್ಮ ದೇವಿಯ ಹಬ್ಬ ಆಚರಣೆ ಮಾಡಿದ್ದಾರೆ. ಬಸವೇಶ್ವರ ಸ್ವಾಮಿ ಕೊಂಡೋತ್ಸದಲ್ಲಿ ದೇವರ ಪೂಜೆ ಪರಿಶಿಷ್ಟ ಸಮುದಾಯದ ಕೇರಿಗಳಲ್ಲೂ ಮೆರವಣಿಗೆ ಆಗಬೇಕು ಎಂಬ ಒತ್ತಾಯದ ಮೇರೆಗೆ ಆಚರಣೆ ನಿಲ್ಲಿಸಲಾಗಿದೆ. ಗ್ರಾಮದ ಎಲ್ಲಾ ಸಮುದಾಯದ ಬೀದಿಗಳಲ್ಲಿ ದೇವರ ಉತ್ಸವ ನಡೆಯಬೇಕು’ ಎಂದು ಗ್ರಾಮದ ಪರಿಶಿಷ್ಟ ಸಮುದಾಯದ ಮುಖಂಡರು ಆಗ್ರಹಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ‘ಗ್ರಾಮದ ಎಲ್ಲಾ ಸಮುದಾಯಗಳು ಸೌಹಾರ್ದದಿಂದ ಜೀವನ ನಡೆಸಿ, ದೇವರ ಕಾರ್ಯಗಳಿಗೆ, ಹಬ್ಬ ಆಚರಣೆಗಳಿಗೆ ಅಡೆತಡೆ ಮಾಡುವುದು ಬೇಡ. ಮುಂದಿನ ದಿನಗಳಲ್ಲಿ ಗ್ರಾಮದ ಮುಖಂಡರೆಲ್ಲರೂ ಸೇರಿ ಕುಳಿತು ಒಮ್ಮತದ ತೀರ್ಮಾನಕ್ಕೆ ಬಂದು ಸಾಮರಸ್ಯದಿಂದ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತಿ ಸಿಇಒ ಕೆ.ಆರ್. ನಂದಿನಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್, ತಹಶೀಲ್ದಾರ್ ಎಸ್.ವಿ. ಲೊಕೇಶ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಂತೋಷ್ ಕುಮಾರ್, ಸಿಪಿಐ ಬಿ.ಎಸ್.ಶ್ರೀಧರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.