ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಲೋಕಪಾವನಿ ನದಿ ಸೇತುವೆ ಬಳಿ ಶುಕ್ರವಾರ ಸರಣಿ ಅಪಘಾತ ನಡೆದು ಗೂಡ್ಸ್ ವಾಹನದಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಸ್ಥಳೀಯರು ರಕ್ಷಿಸಿದರು.
ವಾಹನದ ಸ್ಟಿಯರಿಂಗ್ ಮತ್ತು ಸೀಟಿನ ಮಧ್ಯೆ ಸಿಕ್ಕಿ ಉಸಿರುಕಟ್ಟಿ ಒದ್ದಾಡುತ್ತಿದ್ದ ಮೈಸೂರಿನ ಮಾದೇಶ ಎಂಬವರನ್ನು ಶ್ರೀನಿವಾಸಅಗ್ರಹಾರ, ಕೆ.ಶೆಟ್ಟಹಳ್ಳಿ, ಬಾಬುರಾಯನಕೊಪ್ಪಲು ಗ್ರಾಮಗಳ ಜನರು ತಕ್ಷಣಕ್ಕೆ ಸಿಕ್ಕಿದ ಆಯುಧಗಳನ್ನು ಬಳಸಿ ಹೊತ ತೆಗೆದರು.
ಮಾದೇಶ್ ತಮ್ಮ ಗೂಡ್ಸ್ ವಾಹನ ಚಲಾಯಿಸಿಕೊಂಡು ಮೈಸೂರು ಕಡೆ ಬರುತ್ತಿದ್ದರು. ಮುಂದೆ ಹೋಗುತ್ತಿದ್ದ ಡಾಂಬರು ತುಂಬಿದ್ದ ಟಿಪ್ಪರ್ ಚಾಲಕ ದಿಢೀರ್ ಬ್ರೇಕ್ ಹಾಕಿದಾಗ ಗೂಡ್ಸ್ ವಾಹನ ಟಿಪ್ಪರ್‌ಗೆ ಡಿಕ್ಕಿ ಹೊಡೆಯಿತು. ಗೂಡ್ಸ್ ವಾಹನದ ಹಿಂದೆ ಬರುತ್ತಿದ್ದ ಎಂ–ಸ್ಯಾಂಡ್ ತುಂಬಿದ್ದ ಲಾರಿಯೂ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆಯಿತು. ಹಾಗಾಗಿ ಮಾದೇಶ ಮಧ್ಯೆ ಸಿಲುಕಿಕೊಂಡಿದ್ದರು.
ಮಾದೇಶ್ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಪೊಲೀಸರು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.