ADVERTISEMENT

ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ಮೃತಪಟ್ಟ ತಂದೆ!

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 10:47 IST
Last Updated 21 ನವೆಂಬರ್ 2019, 10:47 IST
   

ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದಲ್ಲಿರುವ ಪಶ್ಚಿಮವಾಹಿನಿ ಬಳಿಯ ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ಹೆಣ್ಣು ಮಕ್ಕಳಿಬ್ಬರನ್ನು ತಂದೆ ನೀರಿಗಿಳಿದು ರಕ್ಷಿಸಿದ್ದಾರೆ. ಆದರೆ, ತಾವು ಹೊರಬರಲು ಸಾಧ್ಯವಾಗದೇ ಬುಧವಾರ ಮುಳುಗಿ ಮೃತಪಟ್ಟಿದ್ದಾರೆ.

ಬೆಂಗಳೂರು ಕಾಮಾಕ್ಷಿಪಾಳ್ಯದ ನಿವಾಸಿ ಮುನಿರಾಜು (48) ಮೃತ ವ್ಯಕ್ತಿ. ಇವರು ಈಚೆಗೆ ನಿಧನರಾಗಿದ್ದ ತನ್ನ ತಾಯಿಯ ಮೃತ ದೇಹದ ಅಸ್ಥಿ ವಿಸರ್ಜನೆಗಾಗಿ ಪತ್ನಿ ಹಾಗೂ ತಮ್ಮ ಮೂವರು ಹೆಣ್ಣು ಮಕ್ಕಳ ಜೊತೆ ಇಲ್ಲಿಗೆ ಬಂದಿದ್ದರು.

ಅಸ್ಥಿ ವಿಸರ್ಜನೆ ನಂತರ ಮೂವರು ಹೆಣ್ಣು ಮಕ್ಕಳ ಪೈಕಿ ಇಬ್ಬರು ಹೆಣ್ಣು ಮಕ್ಕಳು ನದಿ ನೀರಿಗಿಳಿದು ಸ್ನಾನ ಮಾಡುತ್ತಿದ್ದರು. ಆ ವೇಳೆ ನೀರಿಗೆ ಸಿಲುಕಿ ಮಕ್ಕಳು ನದಿಯಲ್ಲಿ ಮುಳುಗುತ್ತಿದ್ದರು. ತಕ್ಷಣ ನದಿಗಿಳಿದ ಮುನಿರಾಜು ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿ ನದಿ ದಡಕ್ಕೆ ತಳ್ಳಿದ್ದಾರೆ. ಆದರೆ ತಾವು ಹೊರಬರಲು ಸಾಧ್ಯವಾಗದೇ ಮುಳುಗಿದ್ದಾರೆ.

ADVERTISEMENT

ತೆಪ್ಪದ ಸಹಾಯದಿಂದ ಸ್ಥಳೀಯರು ರಕ್ಷಣೆ ಮಾಡಲು ಮುಂದಾದರೂ ಅಷ್ಟೊತ್ತಿಗೆ ಮುನಿರಾಜು ಮುಳುಗಿ ಮೃತಪಟ್ಟಿದ್ದರು.

ಮೂವರಿಗೆ ಗಾಯ

ಶ್ರೀರಂಗಪಟ್ಟಣ: ತಾಲ್ಲೂಕಿನ ಕಿರಂಗೂರು ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಒಂದೇ ಕುಟುಂಬದ ಸದಸ್ಯರ ನಡುವೆ ಮಂಗಳವಾರ ಸಂಜೆ ಜಗಳ ನಡೆದು ಮೂವರು ಗಾಯಗೊಂಡಿದ್ದಾರೆ.

ಪಟ್ಟಣದ ನವೀದ್‌ ಎಂಬುವರು ಇಬ್ಬರು ಪತ್ನಿಯರನ್ನು ಹೊಂದಿದ್ದು, ಅವರ ಮಕ್ಕಳಾದ ನಾಸಿರ್‌ ಮತ್ತು ಕಿರಂಗೂರಿನ ಜುಬೇರ್‌ ಕಬ್ಬಿಣದ ಸಲಕರಣೆ ಹಿಡಿದು ಹೊಡೆದಾಡಿದ್ದಾರೆ. ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ. ನವೀದ್‌ ಅವರಿಗೂ ಸಣ್ಣ ಪ್ರಮಾಣದ ಗಾಯವಾಗಿದೆ. ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ.

ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.