ADVERTISEMENT

ಮಾದಕ ವಸ್ತು ಮಾರಾಟಕ್ಕೆ ಕಠಿಣ ಶಿಕ್ಷೆ

ಹಿರಿಯ ಸಿವಿಲ್‌ ನ್ಯಾಯಾಧೀಶ ಮನ್ಸೂರ್‌ ಅಹಮದ್‌ ಜಮಾನ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 14:32 IST
Last Updated 4 ಜುಲೈ 2018, 14:32 IST
ಮಂಡ್ಯದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಬುಧವಾರ ನಡೆದ ಅಂತರ ರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಮನ್ಸೂರ್‌ ಅಹಮದ್‌ ಜಮಾನ್‌ ಮಾತನಾಡಿದರು
ಮಂಡ್ಯದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಬುಧವಾರ ನಡೆದ ಅಂತರ ರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಮನ್ಸೂರ್‌ ಅಹಮದ್‌ ಜಮಾನ್‌ ಮಾತನಾಡಿದರು   

ಮಂಡ್ಯ: ‘ಯುವಜನರು, ಮಕ್ಕಳು ಹಾಗೂ ಹಿರಿಯರು ಮಾದಕ ವಸ್ತುಗಳಿಂದ ದೂರವಿರಬೇಕು. ಮಾದಕ ವಸ್ತುಗಳನ್ನು ಸಂಗ್ರಹ ಹಾಗೂ ಮಾರಾಟ ಮಾಡದರೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಮನ್ಸೂರ್‌ ಅಹಮದ್‌ ಜಮಾನ್‌ ಹೇಳಿದರು.

ಮಂಡ್ಯದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಬುಧವಾರ ನಡೆದ ಅಂತರ ರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ‘ಇತ್ತೀಚಿನ ದಿನದಲ್ಲಿ ಮಾದಕ ವಸ್ತುಗಳಿಗೆ ಮಕ್ಕಳು ಹಾಗೂ ಯುವಜನರು ಬಲಿಯಾಗುತ್ತಿದ್ದಾರೆ. ಬಾಲಕಿಯರು ಕೂಡ ಮಾದಕ ವಸ್ತು ಸೇವನೆ ಮಾಡುತ್ತಿರುವ ಬಗ್ಗೆ ವರದಿಗಳಿವೆ, ಇದು ದುರದೃಷ್ಟಕರ. ಮಾದಕವಸ್ತುಗಳ ಸೇವನೆಯಿಂದ ಆರೋಗ್ಯ ಹಾಳಾಗುತ್ತಿದೆ. ಮಾದಕ ವ್ಯಸನದಿಂದ ಯುವಜನರನ್ನು ದೂರವಿಡಲು ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಅವುಗಳನ್ನು ಸದುಪಯೋಗ ಮಾಡಿಕೊಂಡು ಯುವಜನರು ವ್ಯಸನದಿಂದ ಹೊರಬರಬೇಕು’ ಎಂದು ಸಲಹೆ ನೀಡಿದರು.

‘ಮಾದಕ ವಸ್ತುಗಳನ್ನು ಪರವಾನಗಿ ಇಲ್ಲದೆ ಮಾರಾಟ, ಸಾಗಾಣಿಕೆ, ದಾಸ್ತಾನು ಮಾಡುವಂತಿಲ್ಲ. ಇಷ್ಟೆಲ್ಲಾ ಕಠಿಣ ಕಾನೂನು ಇದ್ದರೂ ಕೆಲವರು ಮಾರಾಟ ಮಾಡುತ್ತಾರೆ. ಹತ್ತು ವರ್ಷದಿಂದ ಹಿಡಿದು ಜೀವಾವಧಿ ಶಿಕ್ಷೆ ವರೆಗೂ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಬಗ್ಗೆ ಎಚ್ಚರವಹಿಸಬೇಕು. ಮಾದಕ ವಸ್ತುಗಳಿಗೆ ಬಲಿಯಾದವರು ಸದಾ ಅಮಲಿನಲ್ಲಿ ಇರುತ್ತಾರೆ. ಯಾವುದೇ ಪರಿಜ್ಞಾನ ಇರುವುದಿಲ್ಲ. ಅವರು ಮಾನಸಿಕ ರೋಗಿಗಳಂತೆ ವರ್ತಿಸುತ್ತಾರೆ. ದುಶ್ಚಟಗಳಿಗೆ ದಾಸರಾಗಿ ಎಲ್ಲರಿಂದಲೂ ದೂರವಿರುತ್ತಾರೆ. ಕೆಲವರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ. ಶೇ 17ರಷ್ಟು ಮಂದಿ ದೇಶದಲ್ಲಿ ಇಂತಹ ದುಶ್ಚಟಗಳಿಗೆ ಬಲಿಯಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಕೆ.ಪಿ. ಅಶ್ವತ್ಥ್‌ , ಮನೋರೋಗ ತಜ್ಞ ಡಾ. ಶಶಾಂಕ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ. ಎಂ. ನಾಗರಾಜು, ತಂಬಾಕು ನಿಯಂತ್ರಣ ಮಂಡಳಿ ಜಿಲ್ಲಾ ಸಲಹೆಗಾರ ತಿಮ್ಮರಾಜು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಭವಾನಿ ಶಂಕರ್, ಜಿಲ್ಲಾ ಮೇಲ್ವಿಚಾರಕರಾದ ಚಿಕ್ಕರಸೇಗೌಡ, ಗೋವಿಂದರಾಜು, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ರಾಘವೇಂದ್ರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.