ಮಂಡ್ಯ: ತಾಲ್ಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ವಿಚಾರಕ್ಕೆ ಗ್ರಾಮದ ಪರಿಶಿಷ್ಟರು ಮತ್ತು ಸವರ್ಣೀಯರ ನಡುವೆ ವೈಮನಸ್ಸು ಮೂಡಿದೆ. ಮೊಟ್ಟೆ ಬೇಡ ಎನ್ನುವ ಪೋಷಕರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ‘ವರ್ಗಾವಣೆ ಪತ್ರ’ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ.
ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 124 ಮಕ್ಕಳು ಹಾಗೂ ಎಲ್‌ಕೆಜಿ ಮತ್ತು ಯುಕೆಜಿಯಲ್ಲಿ 20 ಮಕ್ಕಳು ಇದ್ದಾರೆ. ಶಾಲಾ ಕಟ್ಟಡದ ಬಳಿ ವೀರಭದ್ರೇಶ್ವರಸ್ವಾಮಿ ದೇವಾಲಯವಿದೆ ಎನ್ನುವ ಕಾರಣಕ್ಕೆ ಪೋಷಕರ ಮನವಿ ಮೇರೆಗೆ ಇದುವರೆಗೆ ಮೊಟ್ಟೆ ಬದಲಿಗೆ ಮಕ್ಕಳಿಗೆ ಬಾಳೆಹಣ್ಣು ನೀಡಲಾಗುತ್ತಿತ್ತು.
‘ಪರಿಶಿಷ್ಟ ಜಾತಿಯ 20 ಮಕ್ಕಳು ಶಾಲೆಯಲ್ಲಿದ್ದಾರೆ. ಇವರಿಗೆ ಮೊಟ್ಟೆ ಕೊಡದೆ ಪೌಷ್ಟಿಕ ಆಹಾರದಿಂದ ವಂಚಿಸಲಾಗುತ್ತಿದೆ’ ಎಂದು ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ಸಂಘಟನೆ ಮತ್ತು ಪೋಷಕರು ಜಿಲ್ಲಾಧಿಕಾರಿ ಕಚೇರಿಗೆ ವಾರದ ಹಿಂದೆ ಮನವಿ ನೀಡಿದ್ದರು.
ಮೊಟ್ಟೆ ಕೊಡಲೇಬೇಕು ಎಂದು ಪರಿಶಿಷ್ಟ ಮಕ್ಕಳ ಪೋಷಕರ ಒತ್ತಡದ ಕಾರಣ ಸವರ್ಣೀಯ ಪೋಷಕರು 40ಕ್ಕೂ ಹೆಚ್ಚು ಮಕ್ಕಳನ್ನು ಸಮೀಪದ, ಮಂಡ್ಯ ತಾಲ್ಲೂಕಿನ ಕೀಲಾರ, ಹನಕೆರೆ ಮತ್ತು ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಶಾಲೆಗೆ ಸೇರಿಸಲು ಈಗಾಗಲೇ ಮುಂದಾಗಿದ್ದಾರೆ.
ಮೊಟ್ಟೆ ತಿನ್ನಲು ವಿರೋಧವಿಲ್ಲ:
‘ಮೊಟ್ಟೆ ನೀಡಲು ನಮ್ಮ ವಿರೋಧವಿಲ್ಲ. ಶಾಲೆ ಪಕ್ಕದಲ್ಲೇ ದೇಗುಲವಿದ್ದು, ಇಲ್ಲಿ ಮೊಟ್ಟೆ ಬೇಯಿಸುವುದು ಬೇಡ. ಮನೆಗಳಿಗೆ ಕಳುಹಿಸಿಕೊಡಲಿ ಎಂದು ತಿಳಿಸಿದ್ದೇವೆ. ಶಾಲೆಯಲ್ಲೇ ಕೊಡಬೇಕು ಎಂಬ ಒತ್ತಡ ಹೆಚ್ಚಾದ್ದರಿಂದ ನನ್ನ ಮಗ, ಮಗಳನ್ನು ಈಗ ಕೀಲಾರದ ಶಾಲೆಗೆ ದಾಖಲು ಮಾಡಿದ್ದೇನೆ’ ಎಂದು ಎಸ್‌ಡಿಎಂಸಿ ಸದಸ್ಯ ಚಂದ್ರು ಆಲಕೆರೆ ಹೇಳಿದರು.
‘ಪೋಷಕರ ಮನವೊಲಿಸುತ್ತಿದ್ದೇವೆ. ಗ್ರಾಮಸ್ಥರು ಒಮ್ಮತದ ತೀರ್ಮಾನ ತೆಗೆದುಕೊಂಡರೆ ವಿವಾದ ಬಗೆಹರಿಯುತ್ತದೆ. ಎಲ್ಲ ಮಕ್ಕಳನ್ನು ಆಲಕೆರೆ ಶಾಲೆಯಲ್ಲೇ ಉಳಿಸಿಕೊಳ್ಳಲು ಇದುವರೆಗೆ 3 ಸಭೆಗಳನ್ನು ಮಾಡಿದ್ದೇವೆ’ ಎಂದು ಬಿಇಒ ಸೌಭಾಗ್ಯಾ ಕೆ.ಟಿ. ಹೇಳಿದರು.
ಆಲಕೆರೆ ಶಾಲೆಯಿಂದ ಯಾವ ವಿದ್ಯಾರ್ಥಿಗೂ ಟಿ.ಸಿ ಕೊಟ್ಟಿಲ್ಲ ಮೊಟ್ಟೆ ಕೊಡುವುದು ಸರ್ಕಾರ ಆದೇಶ. ಅದನ್ನು ನಿಲ್ಲಿಸುವುದಿಲ್ಲ ಪೋಷಕರ ಮನವೊಲಿಸುತ್ತಿದ್ದೇವೆ-ಶಿವರಾಮೇಗೌಡ ಡಿಡಿಪಿಐ ಮಂಡ್ಯ
ಶಾಲೆಗಳ ಬಳಿ ದೇವಾಲಯಗಳಿದ್ದರೆ ಅಲ್ಲಿ ಮೊಟ್ಟೆಯ ಬದಲು ಹಣ್ಣುಗಳ ವಿತರಣೆ ಆಗುವಂತೆ ಸರ್ಕಾರ ಆದೇಶಿಸಬೇಕು ಎಂಬುದು ನಮ್ಮ ಒತ್ತಾಯ-ಮಹೇಶ್ ರುದ್ರೇಶ್ ಗ್ರಾಮದ ಮುಖಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.