ADVERTISEMENT

ಮಂಡ್ಯ ಜಿಲ್ಲೆಯಾದ್ಯಂತ ಸರಳ ಈದ್‌ ಮಿಲಾದ್‌ ಆಚರಣೆ

ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ, ಶೈಕ್ಷಣಿಕ ಸಾಧಕರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 13:55 IST
Last Updated 30 ಅಕ್ಟೋಬರ್ 2020, 13:55 IST
ಈದ್‌ ಮಿಲಾದ್‌ ಅಂಗವಾಗಿ ಮುಸ್ಲಿಂ ಸಂಘಟನೆಗಳ ಸದಸ್ಯರು ಜಿಲ್ಲಾಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ವಿತರಣೆ ಮಾಡಿದರು
ಈದ್‌ ಮಿಲಾದ್‌ ಅಂಗವಾಗಿ ಮುಸ್ಲಿಂ ಸಂಘಟನೆಗಳ ಸದಸ್ಯರು ಜಿಲ್ಲಾಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ವಿತರಣೆ ಮಾಡಿದರು   

ಮಂಡ್ಯ: ಈದ್‌ ಮಿಲಾದ್‌ ಅಂಗವಾಗಿ ಶುಕ್ರವಾರ ಮುಸ್ಲಿಂ ಒಕ್ಕೂಟದ ವತಿಯಿಂದ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಕೋವಿಡ್‌ ಕಾರಣದಿಂದ ಜಿಲ್ಲೆಯಾದ್ಯಂತ ಮುಸ್ಲಿಮರು ಸರಳವಾಗಿ ಹಬ್ಬ ಆಚರಣೆ ಮಾಡಿದರು.

ಮೊಹಮ್ಮದ್ ಪೈಗಂಬರ್‌ ಜನ್ಮ ದಿನವನ್ನು ಪ್ರತಿ ವರ್ಷ ವೈಭವದಿಂದ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಸರಳ ಆಚರಣೆಗೆ ಸರ್ಕಾರ ಸಲಹೆ ನೀಡಿತ್ತು. ಅದರಂತೆ ಯಾವುದೇ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ ಇಲ್ಲದೆ ಮನೆಯಲ್ಲೇ ಆಚರಣೆ ಮಾಡಿದರು. ಕುಟುಂಬ ಸದಸ್ಯರು ಮನೆಯಲ್ಲೇ ಖುರಾನ್‌ ಪಠಣ ಮಾಡಿ, ಪ್ರಾರ್ಥನೆ ಸಲ್ಲಿಸಿದರು. ಗಾಂಧೀನಗರದ ಮಸೀದಿ ಸೇರಿದಂತೆ ವಿವಿಧೆಡೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ಜಗತ್ತಿನ ಅವತಾರ ಪುರುಷರಲ್ಲಿ ಒಬ್ಬರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮದಿನ ಕುರಿತು ಮುಸ್ಲಿಂ ಗುರುಗಳು ಮಸೀದಿಗಳಲ್ಲಿ ಸಂದೇಶ ನೀಡಿದರು. ಪೈಗಂಬರರ ಇತಿಹಾಸ, ತ್ಯಾಗ, ಬಲಿದಾನ ಸೇವೆಯ ಮಹತ್ವವನ್ನು ಸ್ಮರಿಸಲಾಯಿತು. ವಿವಿಧ ಮಸೀದಿಗಳಲ್ಲಿ ಮೌಲ್ವಿಗಳು ಪ್ರವಚನ ನೀಡಿದರು.

ADVERTISEMENT

ಡಿಎಚ್‌ಒ ಡಾ.ಎಚ್‌.ಪಿ.ಮಂಚೇಗೌಡ, ಮುಸ್ಲಿಂ ಒಕ್ಕೂಟ ಅಧ್ಯಕ್ಷ ಮುಕ್ತಾರ್‌ ಅಹಮದ್‌, ವಕ್ಫ್‌ ಬೋರ್ಡ್‌ ಅಧ್ಯಕ್ಷ ಉಬೇದುಲ್ಲಾ, ಮೊಹಮದ್‌ ತಾಹೇರ್‌, ಮುಫ್ತಿ ರಿಜ್ವಾನ್‌ ಅಹಮದ್‌, ಅತೀಕ್‌, ಮುಸವೀರ್‌ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ ಮಾಡಿದರು.

ಅಭನಂದನೆ: ಮೈಸೂರು ವಿವಿಯಲ್ಲಿ ಕನ್ನಡ ವಿಷಯದಲ್ಲಿ ಡಾಕ್ಟರೇಟ್‌ ಪದವಿ ಪಡೆದ ಡಾ.ವಸೀಂ ಪಾಷಾ, ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್‌ ಪಡೆದ ಆದಿಲ್‌ ಪಾಷಾ ಅವರನ್ನು ಆಜಾದ್‌ನಗರದ ಮಸೀದಿಯಲ್ಲಿ ಸನ್ಮಾನಿಸಲಾಯಿತು.

ಶೈಕ್ಷಣಿಕ ಮಾರ್ಗದರ್ಶಕ ಸಲೀಂ ಅಹಮದ್‌ ಮಾತನಾಡಿ ‘ಬಡ ಕುಟುಂಬದಿಂದ ಬಂದ ಇಬ್ಬರೂ ಕುಟುಂಬಕ್ಕೆ ಹೊರೆಯಾಗದೆ ತಾವೇ ದುಡಿದು ವಿದ್ಯಾಭ್ಯಾಸ ಮಾಡಿ ಉತ್ತಮ ಸಾಧನೆ ಮಾಡಿದ್ದಾರೆ. ಕನ್ನಡ ಮಾಧ್ಯಮಲ್ಲೇ ಓದಿದ ಅವರ ಸಾಧನೆ ಯುವಕರಿಗೆ ಸ್ಫೂರ್ತಿಯಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.