ADVERTISEMENT

ಉದ್ಯೋಗ ಅರಸಿ ನಗರಗಳಿಗೆ ಯುವಜನರ ಗುಳೇ:ವೃದ್ಧರ ಬಿಡಾರವಾದ ಗಡಿ ಗ್ರಾಮ ಕರಡಿಕೊಪ್ಪಲು

ಇಲ್ಲದ ಮೂಲಸೌಲಭ್ಯಗಳು

ಸತೀಶ್‌ ಕೆ.ಬಳ್ಳಾರಿ
Published 27 ಸೆಪ್ಟೆಂಬರ್ 2018, 19:30 IST
Last Updated 27 ಸೆಪ್ಟೆಂಬರ್ 2018, 19:30 IST
ಮಂಡ್ಯ ತಾಲ್ಲೂಕಿನ ಗಡಿ ಕರಡಿಕೊಪ್ಪಲು ಗ್ರಾಮದಲ್ಲಿ ಡಾಂಬರ್‌ ಕಾಣದ ರಸ್ತೆ
ಮಂಡ್ಯ ತಾಲ್ಲೂಕಿನ ಗಡಿ ಕರಡಿಕೊಪ್ಪಲು ಗ್ರಾಮದಲ್ಲಿ ಡಾಂಬರ್‌ ಕಾಣದ ರಸ್ತೆ   

ಮಂಡ್ಯ: ತಾಲ್ಲೂಕಿನ ಗಡಿ ಕರಡಿಕೊಪ್ಪಲು ಗ್ರಾಮದಲ್ಲಿ ಇಲ್ಲಗಳ ಸರಮಾಲೆಯೇ ಇದೆ. ಶುದ್ಧ ಕುಡಿಯುವ ನೀರು, ರಸ್ತೆ, ಆಸ್ಪತ್ರೆ, ಸಾರಿಗೆ ಬಸ್‌ ಸೌಲಭ್ಯಗಳಿಲ್ಲದ ಕಾರಣ ಯುವಜನರು ನಗರಗಳಿಗೆ ಗುಳೇ ಹೋಗಿದ್ದಾರೆ. ಹೀಗಾಗಿ ಈ ಊರು ವೃದ್ಧರ ಬಿಡಾರದಂತಾಗಿದೆ.

ಕರಡಿಕೊಪ್ಪಲು ಗ್ರಾಮ ಉಪ್ಪಾರಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ರಸ್ತೆ ಸಂಪರ್ಕ ಹಾಗೂ ಬಸ್‌ ಸಂಚಾರ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಹರಸಾಹಸ ಪಡಬೇಕು. ಸಣ್ಣ ಕಾಯಿಲೆ ಬಂದರೂ ಸಮೀಪದ ಮುದಗಂದೂರು ಅಥವಾ ಶಿವಳ್ಳಿಗೆ ಬರಬೇಕು. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಹಲವೆಡೆ ರಸ್ತೆಯಲ್ಲಿ ಕೊಳಚೆ ನೀರು ಹರಿದು ಗಬ್ಬೆದ್ದು ನಾರುತ್ತಿದೆ. ಕಾವೇರಿ ಕಣಿವೆಯ ಶಿಂಷಾ ಶಾಖಾ ನಾಲೆ ಗ್ರಾಮದ ಪಕ್ಕದಲ್ಲೇ ಇದ್ದರೂ ನೀರು ಹರಿಯದ ಕಾರಣ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕೆರಗೋಡು ವಿಧಾನಸಭಾ ಕ್ಷೇತ್ರ ಇದ್ದಾಗ ಈ ಭಾಗದಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದವು. ಕ್ಷೇತ್ರ ಪುನರ್‌ವಿಂಗಡಣೆ ವೇಳೆ ಕೆರಗೋಡು, ಮಂಡ್ಯ ಕ್ಷೇತ್ರದೊಂದಿಗೆ ವಿಲೀನವಾಯಿತು. ಅಲ್ಲಿಂದ ಈ ಭಾಗದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. 20 ವರ್ಷಗಳ ಹಿಂದೆ ಊರಿನ ಪಕ್ಕದ ರಸ್ತೆಗೆ ಡಾಂಬರ್‌ ಹಾಕಿದ್ದೇ ಕೊನೆ, ಇಲ್ಲಿಯವರೆಗೂ ಈ ರಸ್ತೆ ಡಾಂಬರ್‌ ಕಂಡಿಲ್ಲ. ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಯಾದ ನಂತರ ಒಂದು ರೂಪಾಯಿ ಅಭಿವೃದ್ಧಿಯೂ ಆಗಿಲ್ಲ ಎಂದು ಗ್ರಾಮಸ್ಥರು ದೂರಿದರು.

ADVERTISEMENT

‘ಈ ಗ್ರಾಮದಲ್ಲಿ 200 ಕುಟುಂಬಗಳು ವಾಸ ಮಾಡುತ್ತಿವೆ. 100ಕ್ಕೂ ಹೆಚ್ಚು ಯುವಕರು ಬೆಂಗಳೂರು– ಮೈಸೂರು ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಳಮ್ಮನ ಹಬ್ಬ ಹಾಗೂ ಪಿತೃಪಕ್ಷದಲ್ಲಿ ಮಾತ್ರ ಊರಿಗೆ ಬರುತ್ತಾರೆ. ಗ್ರಾಮದಲ್ಲಿ ಹುಡುಕಿದರೆ 8 ಮಂದಿ ಯುವಕರು ಮಾತ್ರ ಸಿಗುತ್ತಾರೆ. ಅದರಲ್ಲಿ ಇಬ್ಬರು ಅಂಗವಿಕಲರಿದ್ದಾರೆ’ ಎಂದು ಗ್ರಾಮದ ನಿವಾಸಿ ಮರೀಗೌಡ ಹೇಳಿದರು.

ಮರೀಚಿಕೆಯಾದ ಸೌಲಭ್ಯ
ಜಿಲ್ಲಾ ಕೇಂದ್ರವಾಗಿರುವ ಮಂಡ್ಯ ತಾಲ್ಲೂಕಿನ ಗಡಿ ಗ್ರಾಮಕ್ಕೆ ಮೂಲ ಸೌಕರ್ಯ ಇಲ್ಲದಿರುವುದು ಜನಪ್ರತಿನಿಧಿಗಳ ಇಚ್ಛಾಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ಗಡಿಗ್ರಾಮಗಳ ಅಭಿವೃದ್ಧಿಗೆ ಯತ್ನಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸಾರಿಗೆ ಸೌಲಭ್ಯ ಸೇರಿ ಮೂಲ ಸೌಕರ್ಯ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

‘ನನ್ನ ಸಣ್ಣ ಹುಡುಗನಾಗಿದ್ದಾಗ ಇದ್ದ ಪರಿಸ್ಥಿತಿ ಈಗಲೂ ಇದೆ. ಮದುವೆಯಾಗಿ, ಮಕ್ಕಳು, ಮೊಮ್ಮಕ್ಕಳಾಗಿವೆ. ಆದರೂ ನಮ್ಮ ಊರಿಗೆ ಬಸ್‌ ಬಂದಿಲ್ಲ. ನಮ್ಮ ಊರಿಗೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡಲು ಹಿಂಜರಿಯುತ್ತಾರೆ. ಒಂದು ಕಿ.ಮೀ ದೂರದಲ್ಲಿ ಬೆಳಿಗ್ಗೆ ಮತ್ತು ಸಂಜೆ ಒಂದು ಬಸ್‌ ಸಂಚಾರ ಮಾಡುತ್ತದೆ. ಆದೂ ನಿಗದಿತ ಸಮಯಕ್ಕೆ ಬರುವುದಿಲ್ಲ. ಆ ಬಸ್‌ ಬಿಟ್ಟರೆ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಿಲ್ಲ’ ಎಂದು ಸುನಂದಮ್ಮ ಹೇಳಿದರು.

‘15 ವರ್ಷಗಳ ಹಿಂದೆ ನಮ್ಮ ಊರಿಗೆ ನಾಲೆ ಬಂತು. ಆದರೆ ಒಮ್ಮೆ ಮಾತ್ರ ನೀರು ಹರಿದಿದೆ. ಆ ನಂತರ ನೀರು ಹರಿದಿದ್ದೇ ಇಲ್ಲ. ಹೀಗಾಗಿ ರೈತರು ನಾಲೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಶಾಸಕ ಎಂ.ಶ್ರೀನಿವಾಸ್‌ ಕೂಡಲೇ ನಮ್ಮ ಊರಿಗೆ ಭೇಟಿ ನೀಡಬೇಕು. ನಮ್ಮ ಸಮಸ್ಯೆ ಆಲಿಸಿ, ಅವುಗಳಿಗೆ ಪರಿಹಾರ ನೀಡಬೇಕು’ ಎಂದು ಗ್ರಾಮದ ನಿವಾಸಿ ಕೆ.ಎಂ.ರಜನಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.