ಮಂಡ್ಯ: ‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಭ್ರಷ್ಟಾಚಾರ ತುಂಬಿಕೊಂಡಿರುವುದರಿಂದಲೇ ಚುನಾವಣೆಯಲ್ಲಿಯೂ ಅಕ್ರಮಗಳು ನಡೆಯುತ್ತಿವೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಆರನೇ ಸಂಸ್ಥಾಪನಾ ದಿನದ ಅಂಗವಾಗಿ ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ‘ಚುನಾವಣಾ ಸುಧಾರಣೆ’ ಕುರಿತು ದಿಕ್ಸೂಚಿ ಭಾಷಣ ಮಾಡಿದರು.
ದೇಶದ ಪ್ರಜಾಪ್ರಭುತ್ವವನ್ನು ಸ್ವಚ್ಛಗೊಳಿಸಬೇಕಾದರೆ ಮೊದಲು ಜನ ಜಾಗೃತರಾಗಬೇಕು. ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಅವಕಾಶಗಳನ್ನು ಸಂವಿಧಾನ ಕೊಟ್ಟಿದೆ. ಸಂವಿಧಾನವು ಜನಸಾಮಾನ್ಯರನ್ನು ಮಾಲೀಕರನ್ನಾಗಿ ಮಾಡಿದೆ. ಸರ್ಕಾರಿ ನೌಕರರನ್ನು ನಮ್ಮ ಸೇವಕರನ್ನಾಗಿಸಿ ಅಧಿಕಾರ ಕೊಟ್ಟಿದೆ ಎಂದರು.
‘ನಮ್ಮ ನ್ಯಾಯಾಂಗ ವ್ಯವಸ್ಥೆ ಏನಾಗಿದೆ ಎಂದರೆ ತಪ್ಪು ಮಾಡಿದ ಜನಾರ್ದನ ರೆಡ್ಡಿಯು ಜೈಲಿಗೆ ಹೋದರು. ನಂತರ ಜಾಮೀನಿನ ಮೇಲೆ ಹೊರಬಂದು ಮತ್ತೆ ಶಾಸಕತ್ವವನ್ನು ಉಳಿಸಿಕೊಂಡರು. ಇತ್ತೀಚೆಗೆ ಪ್ರಜ್ವಲ್ ರೇವಣ್ಣನ ಪಾಳೇಗಾರಿಕೆ ಸಂಸ್ಕೃತಿ ವಿಜೃಂಭಿಸಿತು. ದೇವೇಗೌಡರು ಆತನನ್ನು ಸಂಸದನನ್ನಾಗಿ ಮಾಡಿದರು. ರೇವಣ್ಣ ಅವರು ಪ್ರಜ್ವಲ್ ರೇವಣ್ಣನದು ಅದೆಲ್ಲ ಹಳೆ ಕಥೆ ಎನ್ನುತ್ತಾರೆ. ಆದರೆ, ನ್ಯಾಯಾಲಯ ಇಷ್ಟು ಕಡಿಮೆ ಅವಧಿಯಲ್ಲಿ ಶಿಕ್ಷೆ ಪ್ರಕಟಿಸಿರುವುದು ಸಮಾಧಾನಕರ ಸಂಗತಿ’ ಎಂದು ಹೇಳಿದರು.
‘ಲೋಕಸಭೆಯಲ್ಲಿ ಶೇ 20ರಷ್ಟಿದ್ದ ಕ್ರಿಮಿನಲ್‌ಗಳ ಸಂಖ್ಯೆ ಈಗ ಶೇ 40ಕ್ಕೆ ಏರಿಕೆಯಾಗಿದೆ. ಪ್ರಜಾಪ್ರಭುತ್ವದ ಮಾಲೀಕರಾದ ಮತದಾರರು ಕುಂಭಕರ್ಣ ನಿದ್ರೆಗೆ ಜಾರಿದ್ದಾಗ ರಾಜಕಾರಣಿಗಳು ಇದರ ಲಾಭ ಪಡೆದು ಮಾಡಬಾರದನ್ನು ಮಾಡುತ್ತಾರೆ. ಹಾಗಾಗಿ ನಾಗರಿಕರು ಸೃಜನಶೀಲರಾಗಿ ಮುಂದುವರಿಯುವ ಮೂಲಕ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಮರು ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮಾತನಾಡಿ, ‘ಭ್ರಷ್ಟಾಚಾರ ನಡೆಯುತ್ತಿರುವುದನ್ನು ಕಂಡು ಸುಮ್ಮಿನಿರುವ ಮನಸ್ಸುಗಳು ಭವಿಷ್ಯದ ಕಂಠಕಗಳು. ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಇರಬೇಕು. ಆಂತರಿಕ ಚುನಾವಣೆಯನ್ನು ಚುನಾವಣಾ ಆಯೋಗವೇ ನಡೆಸಬೇಕು’ ಎಂದರು.
ಕೆಆರ್‌ಎಸ್ ಪಕ್ಷದ ದೀಪಕ್, ಅರುಣ್‌ಕುಮಾರ್ ಮತ್ತು ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
‘ಸಾವಿರದಿಂದ ಕೋಟಿಗೇರಿದ ಚುನಾವಣಾ ವೆಚ್ಚ’
ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ ‘ಪ್ರಸ್ತುತದಲ್ಲಿನ ಚುನಾವಣೆ ವ್ಯವಸ್ಥೆ ಸರಿಪಡಿಸಿದರೆ ಪ್ರಜಾಪ್ರಭುತ್ವ ಮತ್ತೆ ಸರಿದಾರಿಗೆ ಬರಲು ಸಾಧ್ಯವಿದೆ. ನಾನು 1984ರಲ್ಲಿ ಮಳವಳ್ಳಿಯಲ್ಲಿ ಚುನಾವಣೆಗೆ ನಿಂತಾಗ ಜನ ನಮ್ಮೂರಿಗೆ ಕುಡಿಯಲು ನೀರು ಕೊಡಿ ರಸ್ತೆ ಮಾಡಿಕೊಡಿ ಎಂದು ಕೇಳುತ್ತಿದ್ದರು. ಆಗ ನಾನು ಅವರ ಅಗತ್ಯತೆಗೆ ಸ್ಪಂದಿಸಿದ ಪರಿಣಾಮ ಮತ್ತೆ ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದರು. ₹20 ಸಾವಿರ ವೆಚ್ಚ ಮಾಡಿ ಶಾಸಕನಾದ ನಾನು ಇವತ್ತು ₹10ರಿಂದ ₹20 ಕೋಟಿ ಖರ್ಚು ಮಾಡುವ ಎಂಎಲ್ಎಗಳನ್ನು ಕಾಣುತ್ತಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸಿದರು.
ಆತ್ಮಸ್ಥೈರ್ಯದಿಂದ ಹೋರಾಟ ಮಾಡುವವರ ವಿರುದ್ಧ ಅಪಪ್ರಚಾರ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ. ನೈತಿಕವಾಗಿ ಗಟ್ಟಿಯಾಗಿರುವುದಕ್ಕೆ ಹೋರಾಟ ಸರಿದಾರಿಯಲ್ಲಿ ಸಾಗುತ್ತಿದೆ. Quote --ಸುನಂದಾ ಜಯರಾಂ, ರೈತ ನಾಯಕಿ
ಚುನಾವಣೆ ಸಂದರ್ಭದಲ್ಲಿ ಕೋಳಿ ಹೆಂಡ ಹಣ ಹಂಚಲು ಬರುವವರಿಗೆ ಮಹಿಳೆಯರು ಪೊರಕೆ ಸೇವೆ ಮಾಡಿದ್ದರೆ ಇವತ್ತು ಭ್ರಷ್ಟಾಚಾರ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.-ಚಂದ್ರಶೇಖರ್ ಇಂಡವಾಳು, ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.