ADVERTISEMENT

ಮಂಡ್ಯ: ಶಿಥಿಲಗೊಂಡ ವಿದ್ಯುತ್‌ ಕಂಬಗಳು; ಅಪಾಯ

ಕಂಬ ಬದಲಾಯಿಸುವಲ್ಲಿ ಸೆಸ್ಕ್‌, ನಗರಸಭೆ ಸಿಬ್ಬಂದಿಯ ನಿರ್ಲಕ್ಷ್ಯ, ಸ್ಥಳೀಯರಲ್ಲಿ ಭಯ

ಎಂ.ಎನ್.ಯೋಗೇಶ್‌
Published 20 ಜುಲೈ 2021, 19:30 IST
Last Updated 20 ಜುಲೈ 2021, 19:30 IST
ಮಂಡ್ಯದ ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಬಾಗಿರುವ ವಿದ್ಯುತ್‌ ಕಂಬ
ಮಂಡ್ಯದ ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಬಾಗಿರುವ ವಿದ್ಯುತ್‌ ಕಂಬ   

ಮಂಡ್ಯ: ನಗರದ ವಿವಿಧೆಡೆ ವಿದ್ಯುತ್‌ ಕಂಬಗಳು ಶಿಥಿಲಾವಸ್ಥೆಗೆ ತಲುಪಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ನಗರಸಭೆ ಹಾಗೂ ಸೆಸ್ಕ್‌ ಸಿಬ್ಬಂದಿಯ ಸಮನ್ವಯತೆಯ ಕೊರತೆಯಿಂದ ಹಲವು ವರ್ಷಗಳಿಂದಲೂ ಹಳೆಯ ವಿದ್ಯತ್‌ ಕಂಬ ಬದಲಾಯಿಸಲು ಸಾಧ್ಯವಾಗಿಲ್ಲ.

ಕಳೆದೊಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಶಿಥಿಲಗೊಂಡಿರುವ ವಿದ್ಯುತ್‌ ಕಂಬಗಳು ನೆಲಕ್ಕುರುಳುವ ಅಪಾಯ ನಿರ್ಮಾಣವಾಗಿದೆ. ವಿವಿಧೆಡೆ ಕಂಬಗಳು ಬಾಗಿರುವ ಕಾರಣ ವಿದ್ಯುತ್‌ ವೈರ್‌ ಬೀಳುವ ಸಂಭವ ಎದುರಾಗಿದೆ. ಸ್ಥಳೀಯರು ನಗರಸಭೆ ಹಾಗೂ ಸೆಸ್ಕ್‌ ಸಿಬ್ಬಂದಿಗೆ ಈ ಕುರಿತು ದೂರು ನೀಡಿದ್ದರೂ ಇಲ್ಲಿಯವರೆಗೆ ಕಂಬಗಳನ್ನು ತೆರವುಗೊಳಿಸಿಲ್ಲ.

ಕೆರೆಯಂಗಳದ ವಿವೇಕಾನಂದ ಬಡಾವಣೆ, ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಹಸಿ ಭೂಮಿ ಹೆಚ್ಚಾಗಿದ್ದು 10ಕ್ಕೂ ಹೆಚ್ಚು ಕಡೆಗಳಲ್ಲಿ ವಿದ್ಯುತ್‌ ಕಂಬಗಳು ವಾಲಿವೆ. ಕೆರೆಯಂಗಳಲ್ಲಿ ವಿದ್ಯುತ್‌ ಪರಿವರ್ತಕ ಹೊತ್ತು ನಿಂತಿರುವ ಕಂಬಗಳೇ ಕೆಳಕ್ಕೆ ವಾಲಿದೆ. ಮೂರು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ಟಿ.ಸಿ ಇರುವ ಜಾಗ ಕೆರೆಯಂತಾಗಿದೆ. ಯಾವಾಗ ಬೇಕಾದರೂ ಕಂಬಗಳು ನೆಲಕ್ಕೆ ಉರುಳಬಹುದು. ಇದರಿಂದ ಆತಂಕಗೊಂಡಿರುವ ಸ್ಥಳೀಯರು ಸೆಸ್ಕ್‌ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ ಈವರೆಗೆ ಯಾರೂ ಭೇಟಿ ನೀಡಿಲ್ಲ.

ADVERTISEMENT

‘ಕಂಬಗಳು ಕೆಳಕ್ಕೆ ಬೀಳುವ ಮೊದಲೇ ಸರಿಪಡಿಸಬೇಕು, ನೆಲಕ್ಕೆ ಬಿದ್ದಾಗ ಎಲ್ಲರೂ ಬರುತ್ತಾರೆ. ವೈರ್‌ ಕೆಳಕ್ಕೆ ಬಿದ್ದು ವಿದ್ಯುತ್‌ ಶಾಕ್‌ ಹೊಡೆದರೆ ಏನು ಗತಿ? ಕಂಬ ಬಿದ್ದಮೇಲೆ ದಿನಪೂರ್ತಿ ವಿದ್ಯುತ್‌ ಸ್ಥಗಿತಗೊಳಿಸಿ ಕೆಲಸ ಮಾಡುತ್ತಾರೆ. ಇದರ ಬದಲಾಗಿ ಈಗಲೇ ಬಾಗಿರುವ ಕಂಬಗಳನ್ನು ಸರಿಪಡಿಸಬೇಕು’ ಎಂದು ಕೆರೆಯಂಗಳದ ಬಿ.ಮಹೇಶ್‌ ಒತ್ತಾಯಿಸಿದರು.

ಬಸವನಗುಡಿಯ 3ನೇ ಕ್ರಾಸ್‌ನಲ್ಲಿ ಕಳೆದೊಂದು ವರ್ಷದಿಂದ ವಿದ್ಯುತ್‌ ಕಂಬಗಳು ಬಾಗಿವೆ. ತುಂತುರು ಮಳೆ ಸುರಿಯುತ್ತಿರುವ ಕಾರಣ ಯಾವದೇ ಸಂದರ್ಭದಲ್ಲಿ ಕೆಳಕ್ಕೆ ಬೀಳಬಹುದು. ಈ ಕುರಿತು ಜನರು ನಗರಸಭೆ ಅಧ್ಯಕ್ಷರನ್ನು ಭೇಟಿಯಾಗಿ ಕಂಬ ಬದಲಾವಣೆ ಮಾಡುವಂತೆ ಕೋರಿದ್ದಾರೆ. ಆದರೆ ಈವರೆಗೆ ಕಂಬ ಬದಲಾವಣೆ ಕಾರ್ಯ ನಡೆದಿಲ್ಲ.

26ನೇ ವಾರ್ಡ್‌ ಸಫ್ದಾರಿಯಾಬಾದ್‌ ಮೊಹಲ್ಲಾದಲ್ಲಿ 2 ವಿದ್ಯುತ್‌ ಕಂಬಗಳು ಅಪಾಯಕಾರಿಯಾಗಿ ಬಾಗಿವೆ. ಈ ಕುರಿತು ಸ್ಥಳೀಯರು ಹಾಗೂ ಸ್ಥಳೀಯ ವಾರ್ಡ್‌ ಸದಸ್ಯ ಶ್ರೀಧರ್‌ ಸೆಸ್ಕ್‌ ಸಿಬ್ಬಂದಿಗೆ ದೂರು ನೀಡಿದ್ದಾರೆ. ಮಳೆ ಆರಂಭವಾಗುಷ್ಟರಲ್ಲಿ ಕಂಬ ಬದಲಿಸಬೇಕು ಎಂಬ ಅವರ ಮನವಿಗೆ ಸೆಸ್ಕ್‌ ಸಿಬ್ಬಂದಿ ಸ್ಪಂದಿಸಿಲ್ಲ.

‘ನಮ್ಮ ವಾರ್ಡ್‌ನಲ್ಲಿ ವಿವಿಧೆಡೆ ಹಲವು ಕಂಬಗಳನ್ನು ಬದಲಾವಣೆ ಮಾಡಿದ್ದಾರೆ. ಆದರೆ ಹಳೆಯ ಕಂಬಗಳನ್ನು ತೆಗೆದುಕೊಂಡು ಹೋಗದೇ ಬಿಸಾಡಿ ಹೋಗಿದ್ದಾರೆ. ಕಂಬಗಳು ಬಿದ್ದಿರುವ ಜಾಗಗಳಲ್ಲಿ ಜನರು ಕಸ ಹಾಕುತ್ತಿದ್ದಾರೆ. ಸೆಸ್ಕ್‌ ಸಿಬ್ಬಂದಿಯೇ ಹಳೆಯ ಕಂಬಗಳ ತಾಜ್ಯವನ್ನು ನಿರ್ವಹಣೆ ಮಾಡಬೇಕು. ಎಲ್ಲೆಂದರಲ್ಲಿ ಬಿಸಾಡಿ ಹೋಗಬಾರದು’ ಎಂದು ನಗರಸಭೆ ಸದಸ್ಯ ಶ್ರೀಧರ್‌ ಒತ್ತಾಯಿಸಿದರು.

ಸಿಹಿ ನೀರಿನ ಕೊಳ, ಪೇಟೆಬೀದಿ, ಹೊಸಹಳ್ಳಿ, ಕಲ್ಲಹಳ್ಳಿ ಸೇರಿದಂತೆ ವಿವಿಧೆಡೆ ಕಂಬಗಳು ಬಾಗಿದ್ದು ಬದಲಾವಣೆ ಕಾಮಗಾರಿಗಾಗಿ ಕಾಯುತ್ತಿವೆ. ಹಳೆಯ ಸಿಮೆಂಟ್‌ಗಳ ಬದಲಿಗೆ ಕಬ್ಬಿಣದ ಕಂಬ ಅಳವಡಿಸಬೇಕು ಎಂದು ಒತ್ತಾಯ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಆದರೆ ಈವರೆಗೂ ಅಧಿಕಾರಿಗಳು ಜನರ ಬೇಡಿಕೆಗಳಿಗೆ ಸ್ಪಂದಿಸಿಲ್ಲ.

‘ನಗರದಲ್ಲಿ ಬಾಗಿದ ಸ್ಥಿತಿಯಲ್ಲಿರುವ ವಿದ್ಯುತ್‌ ಕಂಬಗಳನ್ನು ಪಟ್ಟಿ ಮಾಡಿ ಸೆಸ್ಕ್‌ ಅಧಿಕಾರಿಗಳಿಗೆ ಕಳುಹಿಸಿದ್ದೇವೆ. ಸಾಧ್ಯವಾದಷ್ಟು ಬೇಗ ಕಂಬ ಬದಲಾಯಿಸಬೇಕು ಎಂದು ಮನವಿ ಮಾಡಿದ್ದೇವೆ’ ಎಂದು ನಗರಸಭೆ ಪೌರಾಯುಕ್ತ ಎಸ್‌.ಲೋಕೇಶ್‌ ಹೇಳಿದರು.

ಸಾರ್ವಜನಿಕ ಸ್ಥಳದಲ್ಲಿ ವೈಯಕ್ತಿಕ ಟಿಸಿ
ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಂಗಳು, ಡಯಾಗ್ನೋಸ್ಟಿಕ್‌ ಕೇಂದ್ರಗಳು ಹಾಗೂ ಖಾಸಗಿ ಬಂಗಲೆಗಳಲ್ಲಿ ವೈಯಕ್ತಿಕವಾಗಿ ವಿದ್ಯುತ್‌ ಪರಿವರ್ತಕ ಅಳವಡಿಸಲಾಗಿದೆ. ಟಿಸಿಗಳನ್ನು ಖಾಸಗಿ ಜಾಗದಲ್ಲಿ ಅಳವಡಿಸಿಕೊಳ್ಳುವ ಬದಲು ಸಾರ್ವಜನಿಕ ರಸ್ತೆಗಳಲ್ಲಿ ಅಳವಡಿಸಿರುವುದು ಬೆಳಕಿಗೆ ಬಂದಿದೆ.

‘ಕಟ್ಟಡಗಳ ಮಾಲೀಕರು ತಮ್ಮ ಖಾಸಗಿ ಜಾಗದಲ್ಲಿ ಟಿಸಿ ಅಳವಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಸರ್ಕಾರಿ ಜಾಗದಲ್ಲಿ, ರಸ್ತೆಗಳಲ್ಲಿ ಅಳವಡಿಸಿಕೊಂಡರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕೂಡಲೇ ಸೆಸ್ಕ್‌ ಸಿಬ್ಬಂದಿ ಇಂತಹ ಟಿಸಿಗಳನ್ನು ತೆರವುಗೊಳಿಸಬೇಕು’ ಎಂದು ನಗರಸಭೆ 1ನೇ ವಾರ್ಡ್‌ ಸದಸ್ಯ ನಾಗೇಶ್ ಒತ್ತಾಯಿಸಿದರು.

***
ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್‌ ಕಂಬಗಳನ್ನು ಬದಲಾವಣೆ ಮಾಡುವಂತೆ ನಮ್ಮ ಸಿಬ್ಬಂದಿಗೆ ಸೂಚಿಸಲಾಗಿದೆ. ತ್ವರಿತಗತಿಯಲ್ಲಿ ಈ ಕಾರ್ಯ ಮಾಡುವಂತೆ ಸುಚಿಸುತ್ತೇನೆ.
–ಕುಮಾರ್‌, ಅಧೀಕ್ಷಕ ಎಂಜಿನಿಯರ್‌, ಸೆಸ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.