ADVERTISEMENT

ಶುದ್ಧ ನೀರು ಪೂರೈಕೆಗೆ ಕ್ರಮ ವಹಿಸಿ: ಶಾಸಕ ಎಚ್.ಟಿ. ಮಂಜು ಸೂಚನೆ

ಪುರಸಭೆ ಅಧಿಕಾರಿಗಳು ಮತ್ತು ನಾಗರಿಕರ ಸಭೆಯಲ್ಲಿ ಶಾಸಕ ಎಚ್.ಟಿ. ಮಂಜು ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 5:20 IST
Last Updated 22 ಜನವರಿ 2026, 5:20 IST
 ಕೆ.ಆರ್.ಪೇಟೆ ಪಟ್ಟಣದಲ್ಲಿ ಶಾಸಕ ಎಚ್.ಟಿ.ಮಂಜು ಪುರಸಭೆಯ ಅಧಿಕಾರಿಗಳು ಮತ್ತು ನಾಗರೀಕರ ಸಭೆ  ನಡೆಸಿದರು.
 ಕೆ.ಆರ್.ಪೇಟೆ ಪಟ್ಟಣದಲ್ಲಿ ಶಾಸಕ ಎಚ್.ಟಿ.ಮಂಜು ಪುರಸಭೆಯ ಅಧಿಕಾರಿಗಳು ಮತ್ತು ನಾಗರೀಕರ ಸಭೆ  ನಡೆಸಿದರು.   

ಕೆ.ಆರ್.ಪೇಟೆ: ‘ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವುದು ಪುರಸಭೆಯ ಜವಾಬ್ದಾರಿ.  ಮುಖ್ಯಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪ್ರತಿದಿನ ಜನರಿಗೆ ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಲು ಕಾರ್ಯಪ್ರವೃತ್ತರಾಗಿ’ ಎಂದು ಶಾಸಕ ಎಚ್.ಟಿ. ಮಂಜು ಎಂದು ಹೇಳಿದರು.

ಪಟ್ಟಣದ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನಾ ಭವನದಲ್ಲಿ ಮಂಗಳವಾರ ಪುರಸಭೆ ಆಡಳಿತಾಧಿಕಾರಿಗಳು, ಮುಖ್ಯಾಧಿಕಾರಿ ಹಾಗೂ ಕಚೇರಿಯ ಸಿಬ್ಬಂದಿ ಮತ್ತು ಸಾರ್ವಜನಿಕರೊಂದಿಗೆ ಕುಂದು ಕೊರತೆ ನಿವಾರಣಾ ಸಮಾಲೋಚನ ಸಭೆ ನಡೆಸಿ ಅವರು ಮಾತನಾಡಿದರು.

‘ಪಟ್ಟಣದ 23 ವಾರ್ಡ್‌ಗಳಲ್ಲಿಯೂ ಪ್ರತಿದಿನ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ನಾಗರಿಕರಿಗೆ ಉತ್ತರ ಹೇಳಿ ಸಾಕಾಗಿದೆ. ನೀರು ಬಿಡುವುದೇ ಮೂರುದಿನಗಳಿಗೊಮ್ಮೆ. ಬಿಡುವ ನೀರನ್ನು ಕನಿಷ್ಠ ಒಂದೆರಡು ಗಂಟೆ ಬಿಡದಿದ್ದರೆ ಪುರಸಭೆಯ ನೀರನ್ನೇ ನಂಬಿದವರ ಕತೆ ಏನಾಗಬೇಕು. ಜಯನಗರ ಸೇರಿದಂತೆ ಹಲವು ಕಡೆ ಜನ ಟ್ಯಾಂಕ್ ಮೂಲಕ ಮನೆಗೆ ನೀರು ತುಂಬಿಸಿಕೊಳ್ಳುತಿದ್ದಾರೆ. ಹೀಗಿರುವಾಗ ಜಲಜೀವನ್ ಮಿಷನ್ ಕಾರ್ಯಕ್ರಮದ ಮನೆ -ಮನೆಗೆ ಗಂಗೆ ಯೋಜನೆಯ ಉದ್ದೇಶವಾದರೂ ಏನು’ ಎಂದು ಪ್ರಶ್ನಿಸಿದರು.

ADVERTISEMENT

‘ಹೊಸದಾಗಿ ಪೈಪ್ ಲೈನ್ ಕಾಮಗಾರಿ ನಡೆಸಿರುವುದರಿಂದ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸರಿಪಡಿಸುತ್ತೇವೆ ಎಂಬ ಸಿದ್ಧ ಉತ್ತರ ಹೇಳುವುದನ್ನು ಬಿಟ್ಟು ಸರಿಯಾಗಿ ಕಾಮಗಾರಿ ಮುಗಿಸಿ. ಪೈಪ್ ಲೈನ್ ಅಳವಡಿಸುವಾಗ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಿ ಪ್ರತಿದಿನ ನೀರು ಕೊಡುವ ವ್ಯವಸ್ಥೆ ಮಾಡಿ’ ಎಂದು ಜಲಜೀವನ್ ಯೋಜನೆಯ ಅಧಿಕಾರಿಗಳು, ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಟ್ಟಣದಲ್ಲಿ ಹಲವು ದಶಕಗಳಿಂದ ಒಳಚರಂಡಿ ಯೋಜನೆ ಕುಂಟುತ್ತ ಸಾಗಿರುವ ಬಗ್ಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರದಿದ್ದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಪಟ್ಟಣದ ನಾಗರಿಕರ ಹಿತರಕ್ಷಣ ವೇದಿಕೆ ಅಧ್ಯಕ್ಷ ಕೆ.ಎಸ್.ಸುರೇಶ್ ಕುಮಾರ್, ಪಟ್ಟಣದ ಜನತೆಯು ಎದುರಿಸುತ್ತಿರುವ ದೈನಂದಿನ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಬೀದಿ ಬದಿ ವ್ಯಾಪರಸ್ಥರ ಸಂಘದ ಪರವಾಗಿ ರತ್ನಮ್ಮ ಮತ್ತು ಸೈಯದ್ ರೋಷನ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾದ ಸ್ಥಳ ಒದಗಿಸುವಂತೆ ಮನವಿ ಮಾಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ಪುರಸಭೆ ವ್ಯಾಪ್ತಿಯಲ್ಲಿ ಬರುವ 150ಕ್ಕೂ ಹೆಚ್ಚಿನ ಅಂಗಡಿ ಮಳಿಗೆಗಳ ಒಪ್ಪಂದದ ಅವಧಿ ಮುಗಿದಿರುವುದರಿಂದ ಮರು ಹರಾಜು ಮಾಡುವಂತೆ ಆಗ್ರಹಿಸಿದರು.

ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಸೋಮಶೇಖರ್, ಪ್ರಮುಖರಾದ ಡಿ.ಪ್ರೇಮ್ ಕುಮಾರ್, ಚಾ. ಶಿ ಜಯಕುಮಾರ್  ಸಲಹೆ ಸೂಚನೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್ ಯು.ಎಸ್.ಅಶೋಕ್, ಮುಖ್ಯಾಧಿಕಾರಿ ಅಶೋಕ್, ಒಳಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ನದಾಫ್, ಪುರಸಭೆಯ ಸಹಾಯಕ ಎಂಜಿನಿಯರ್‌ ಬಸವೇಗೌಡ, ಚೌಡಪ್ಪ, ಪ್ರಿಯಾಂಕಾ, ಹಿರಿಯ ಆರೋಗ್ಯ ಪರಿವೀಕ್ಷಕ ಅಶೋಕ್, ಕಚೇರಿಯ ವ್ಯವಸ್ಥಾಪಕಿ ಕಾಂಚನ ಇದ್ದರು.

ಆಪರೇಷನ್ ಫುಟ್‌ಪಾತ್‌: ಎಚ್ಚರಿಕೆ

ಪುರಸಭೆಯ ಆಡಳಿತಾಧಿಕಾರಿ ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಮಾತನಾಡಿ ‘ಕೆ.ಆರ್.ಪೇಟೆ ಪಟ್ಟಣವು ಮಂಡ್ಯ ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಮುಖ್ಯ ರಸ್ತೆ ಸೇರಿದಂತೆ ಪಟ್ಟಣದ ರಸ್ತೆಗಳಲ್ಲಿ ಪಾದಾಚಾರಿಗಳು ಸಂಚರಿಸುವುದು ಕಷ್ಟವಾಗಿರುವ ಬಗ್ಗೆ ದೂರುಗಳು ಬಂದಿವೆ. ಆದ್ದರಿಂದ ಫುಟ್‌ಪಾತ್‌ ಅತಿಕ್ರಮಿಸಿರುವ ಬೀದಿ ವ್ಯಾಪಾರಿಗಳು ಜನಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಆಪರೇಷನ್ ಫುಟ್‌ಪಾತ್‌ ಕಾರ್ಯಾಚರಣೆ ನಡೆಸುವುದು ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.