ADVERTISEMENT

ಮಳವಳ್ಳಿ: ದಾಸನದೊಡ್ಡಿಯ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2022, 2:58 IST
Last Updated 17 ಅಕ್ಟೋಬರ್ 2022, 2:58 IST
   

ಮಂಡ್ಯ: ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕುಂದನಿ ಬೆಟ್ಟದ ಮೇಲೆ 15 ಕಟ್ಟೆ ಕಟ್ಟಿ ಪ್ರಸಿದ್ಧಿ ಪಡೆದಿದ್ದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ (83) ಸೋಮವಾರ ನಸುಕಿನಲ್ಲಿ ನಿಧನರಾದರು.

ಕುರಿಗಾಹಿಯಾಗಿದ್ದ ಅವರು ಕುರಿ ಮಾರಿ ಸಂಪಾದಿಸಿದ ಹಣದಲ್ಲಿ ಬೆಟ್ಟದ ಮೇಲೆ ಕಟ್ಟೆಗಳನ್ನು ತೋಡಿಸಿದ್ದರು. ಪ್ರತಿ ಕಟ್ಟೆಗೂ ದೇವರು ಹಾಗೂ ಮೊಮ್ಮಕ್ಕಳ ಹೆಸರು ಇಟ್ಟಿದ್ದರು. ಹಲವು ವರ್ಷಗಳಿಂದಲೂ ಕಟ್ಟೆಗಳನ್ನು ಸಂರಕ್ಷಿಸಿ ಬೆಟ್ಟದ ತಟದಲ್ಲಿ ಹಸಿರು ಪರಿಸರ ಇರುವಂತೆ ನೋಡಿಕೊಂಡಿದ್ದರು. ಬೆಟ್ಟದ ಮೇಲ್ಭಾಗ ಹಾಗೂ ತಟದಲ್ಲಿ ನೂರಾರು ಸಸಿ ನೆಟ್ಟು ಬೆಳೆಸಿದ್ದರು.

ಕಾಮೇಗೌಡರ ಪ್ರಕೃತಿ ಸಂರಕ್ಷಣೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿತ್ತು, 2020ರಲ್ಲಿ ‘ಮನ್‌ ಕಿ ಬಾತ್‌’ ಸರಣಿಯಲ್ಲಿ ಕಾಮೇಗೌಡರ ಸೇವೆಯನ್ನು ಕೊಂಡಾಡಿದ್ದರು. ರಾಷ್ಟ್ರಮಟ್ಟದಲ್ಲಿ ಹಲವು ನಾಯಕರು ಅವರ ಸೇವೆಯನ್ನು ಹೊಗಳಿದ್ದರು. ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಕೂಡ ಅವರ ಸೇವೆಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದರು.

ADVERTISEMENT

ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಮಾಗೋವಿಂದ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿದ್ದವು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ, ಅವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.