ADVERTISEMENT

ಕಂದಾಯ ಇಲಾಖೆ ಅಧಿಕಾರಿಗಳಿಂದ ಒತ್ತುವರಿ ರಸ್ತೆ ತೆರವು

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 5:25 IST
Last Updated 9 ಜುಲೈ 2025, 5:25 IST
ಹಲಗೂರು ಸಮೀಪದ ವಿ.ಬಸಾಪುರ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಒತ್ತುವರಿಯಾಗಿದ್ದನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು
ಹಲಗೂರು ಸಮೀಪದ ವಿ.ಬಸಾಪುರ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಒತ್ತುವರಿಯಾಗಿದ್ದನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು   

ಹಲಗೂರು:ಸಮೀಪದ ವಿ.ಬಸಾಪುರ ಗ್ರಾಮದ ಸರ್ವೆ ನಂ.39, 42, 41, 31, 32, 29 ರಲ್ಲಿ ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ರಸ್ತೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವು ಗೊಳಿಸಿದರು.

ಹಲಗೂರು-ಮದ್ದೂರು ಮುಖ್ಯ ರಸ್ತೆಯಿಂದ ಹಲಗನದೊಡ್ಡಿಗೆ ತೆರಳುವ ಸಾರ್ವಜನಿಕ ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ನೆರೆಹೊರೆಯ ಜಮೀನುಗಳಿಗೆ ಹೋಗಲು ತೊಂದರೆ ಆಗುತ್ತಿದೆ. ಜಮೀನು ಮಾಲೀಕರು, ರೈತರು ಕೃಷಿ ಚಟುವಟಿಕೆಗಳಿಗೆ ಹೋಗಿ ಬರಲು ತೀವ್ರ ತೊಂದರೆ ಪಡಬೇಕಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳನ್ನು ನಿಲ್ಲಿಸುವಂತಾಗಿದೆ. ಈ ಭಾಗದಲ್ಲಿ ಖಾಸಗಿ ಶಾಲೆ ಇದ್ದು, ಸಂಚರಿಸಲು ವಾಹನ ಸವಾರರು ತ್ರಾಸ ಪಡುವಂತಾಗಿದೆ. ರೈತರು, ಸಾರ್ವಜನಿಕರು ಮತ್ತು ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲ ಆಗುವಂತೆ ರಸ್ತೆ ತೆರವು ಮಾಡಿ ಕೊಡಬೇಕೆಂದು ಹಲಗೂರು ಗ್ರಾಮದ ಎಚ್.ವಿ.ಅಶ್ವಿನ್ ಕುಮಾರ್ ಅವರು ಮಳವಳ್ಳಿ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು.

ಮೇಲಧಿಕಾರಿಗಳ ಅದೇಶದ ಮೇರೆಗೆ ಹಲಗೂರು ವೃತ್ತದ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಮಧುಸೂದನ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ತಾಲ್ಲೂಕು ಸರ್ವೆಯರ್‌ ಎಂ.ಎಸ್.ಬೀರೇಶ್ ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ, ರಸ್ತೆಯ ಜಾಗ ಗುರುತಿಸಿದರು. ಹಲಗೂರು ಪೊಲೀಸ್ ಠಾಣೆಯ ಎಎಸ್ಐ ಶಿವಣ್ಣ ಮತ್ತು ಸಿಬ್ಬಂದಿಬ ಬಿಗಿ ಭದ್ರತೆಯಲ್ಲಿ ಸದರಿ ಕಾಲು ದಾರಿಯನ್ನು ಜೆಸಿಬಿ ಯಂತ್ರದಿಂದ ತೆರವುಗೊಳಿಸಿ, ಶಾಲೆ ಮತ್ತು ರೈತರ ಜಮೀನುಗಳಿಗೆ ಸಂಚರಿಸಲು ಅನುವು ಮಾಡಿಕೊಡಲಾಯಿತು.

ADVERTISEMENT

ಗ್ರಾಮ ಲೆಕ್ಕಿಗರಾದ ಶಿವಶಂಕರ್, ಲತಾ, ಎಎಸ್ಐ ಶಿವಣ್ಣ, ಅರ್ಜಿದಾರ ಎಚ್.ವಿ.ಅಶ್ವಿನ್ ಕುಮಾರ್, ಪೊಲೀಸ್ ಸಿಬ್ಬಂದಿ ನಾಗೇಶ್, ಚಂದ್ರಕಾಂತ, ಭರಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.