ADVERTISEMENT

ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂ ಗ್ರಾಮದಲ್ಲಿ ಸ್ಫೋಟ: ದಿಕ್ಕಾ‍ಪಾಲಾಗಿ ಓಡಿದ ಜನ

ಗಿಡ್ಡಂಗಿ ಹೊಳೆ ಎಂಬಲ್ಲಿ ನಡೆದ ಘಟನೆ: ದಿಕ್ಕಾ‍ಪಾಲಾಗಿ ಓಡಿದ ಜನ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 5:13 IST
Last Updated 29 ನವೆಂಬರ್ 2020, 5:13 IST
ಗಂಜಾಂ ಗ್ರಾಮದ ಸಮೀಪ ಕಲ್ಲು ಸ್ಫೋಟ ಮಾಡಿರುವುದು
ಗಂಜಾಂ ಗ್ರಾಮದ ಸಮೀಪ ಕಲ್ಲು ಸ್ಫೋಟ ಮಾಡಿರುವುದು   

ಶ್ರೀರಂಗಪಟ್ಟಣ: ತಾಲ್ಲೂಕಿನ ಗಂಜಾಂ ಗ್ರಾಮದ ಸಮೀಪ ಶನಿವಾರ ಮಧ್ಯಾಹ್ನ ಕಲ್ಲು ಸ್ಫೋಟಿಸಲಾಗಿದ್ದು, ಜನರು ಗಾಬರಿಯಿಂದ ಮನೆ, ಅಂಗಡಿ– ಮುಂಗಟ್ಟು ಬಿಟ್ಟು ಹೊರಗೆ ಓಡಿದ್ದಾರೆ.

ಗಂಜಾಂ ಗ್ರಾಮಕ್ಕೆ ಹೊಂದಿಕೊಂಡಿ ರುವ ಗಿಡ್ಡಂಗಿ ಹೊಳೆ ಎಂಬಲ್ಲಿ ಸ್ಫೋಟ ಸಂಭವಿಸಿದೆ. ಬೆಂಗಳೂರು–ಮೈಸೂರು ದಶಪಥ ಕಾಮಗಾರಿ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಸೇತುವೆ ನಿರ್ಮಿಸುತ್ತಿರುವ ಡಿಬಿಎಲ್‌ ಕಂಪನಿ ಈ ಸ್ಫೋಟ ನಡೆಸಿದೆ. ಸ್ಫೋಟದ ರಭಸಕ್ಕೆ ಕಲ್ಲುಗಳು ಫರ್ಲಾಂಗು ದೂರದವರೆಗೆ ಹಾರಿ ಮನೆಗಳ ಮೇಲೆ ಬಿದ್ದಿವೆ. ನದಿ ಅಂಚಿನ ಜಮೀನಿನಲ್ಲೂ ಕಲ್ಲಿನ ಚೂರುಗಳು ಬಿದ್ದಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರು ದಿಕ್ಕಾಪಾಲಾಗಿ ಓಡಿದ್ದಾರೆ.

ಗಂಜಾಂ ಪಕ್ಕದಲ್ಲಿ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ– 275 ನಿರ್ಮಾಣ ಕಾಮಗಾರಿ ನಡೆಸುವ ಗುತ್ತಿಗೆ ಕಂಪನಿ ಸಿಬ್ಬಂದಿ, ಸ್ಥಳೀಯರಿಗೆ ಮಾಹಿತಿ ನೀಡದೆ ಕಲ್ಲು ಬಂಡೆಯನ್ನು ಸ್ಫೋಟಿಸಿದ್ದಾರೆ. ಗಂಜಾಂ ಮಾತ್ರವಲ್ಲದೆ ಶ್ರೀರಂಗಪಟ್ಟಣ, ಬಾಬುರಾಯನಕೊಪ್ಪಲು, ಶ್ರೀನಿವಾಸ ಅಗ್ರಹಾರ ಗ್ರಾಮಗಳ ಜನರಿಗೂ ಸದ್ದು ಕೇಳಿದ್ದು, ಜನರು ಭಯಭೀತರಾಗಿದ್ದಾರೆ.

ADVERTISEMENT

‘ಸಾರ್ವಜನಿಕರಿಗೆ ಮುನ್ಸೂಚನೆ ನೀಡದೇ ಕಲ್ಲು ಸ್ಫೋಟ ಮಾಡಿದ್ದರೆ, ಗುತ್ತಿಗೆದಾರ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

‘ಡಿಬಿಎಲ್‌ ಕಂಪನಿ ಕಾಳೇನಹಳ್ಳಿ ಬಳಿ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದೆ. ಸರ್ಕಾ ರದ ಅನುಮತಿ ಪಡೆಯದೆ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಡಿಎಫ್‌ಒ ಹೇಳಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಣವಂತರ ಅಕ್ರಮಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಗಂಜಾಂ ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಾಣ ಉದ್ದೇಶಕ್ಕೆ ಹಾಡಹಗಲೇ ಸ್ಫೋಟ ನಡೆಸುತ್ತಿದ್ದಾರೆ. ಜನರಿಗೆ ತೊಂದರೆ ಆದರೂ ಅಧಿ ಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಘ ಟನಾ ಸಂಚಾಲಕ ಗಂಜಾಂ ರವಿಚಂದ್ರ, ಮುಂಡುಗದೊರೆ ಮೋಹನ್‌, ಶ್ರೀಕಂಠು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.