ADVERTISEMENT

ನಾಲೆ ಕೊನೆ ಭಾಗಕ್ಕೆ ನೀರು ಹರಿಸಿ: ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ

ವಿ.ಸಿ.ನಾಲೆ ಕೊನೆ ಭಾಗಕ್ಕೆ ನೀರು ಹರಿಸುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 4:09 IST
Last Updated 26 ಆಗಸ್ಟ್ 2025, 4:09 IST
ಜಿಲ್ಲೆಯ ಕೊನೆ ಭಾಗದಲ್ಲಿರುವ ವಿ.ಸಿ.ನಾಲೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು   ಮಂಡ್ಯ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಜಿಲ್ಲೆಯ ಕೊನೆ ಭಾಗದಲ್ಲಿರುವ ವಿ.ಸಿ.ನಾಲೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು   ಮಂಡ್ಯ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ಜಿಲ್ಲೆಯ ಕೊನೆ ಭಾಗದಲ್ಲಿರುವ ವಿ.ಸಿ.ನಾಲೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ವಿ.ಸಿ.ನಾಲೆ ಲೋಕಸರ ಶಾಖೆಯ ಕೊನೆಯ ಅಚ್ಚುಕಟ್ಟು ಭಾಗ, ಮದ್ದೂರು ತಾಲ್ಲೂಕು ಹಾಗೂ ಮಳವಳ್ಳಿ ತಾಲ್ಲೂಕಿನ ಕೊನೆ ಭಾಗದ ಜಮೀನುಗಳಿಗೆ ನೀರು ಬಿಡದೆ ನೀರಾವರಿ ಇಲಾಖೆ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ. ಮದ್ದೂರು ಶಾಸಕ ಕೆ.ಎಂ. ಉದಯ್ ಅವರು ಹೇಳಿದ್ದಾರೆ ಎಂದು ಈಗ ನಾಲೆ ಕಾಮಗಾರಿ ಮಾಡುತ್ತಿದ್ದಾರೆ, ಇದರಿಂದ ಮಕ್ಕೆ ಮಳೆಯ ವೇಳೆಯಲ್ಲಿ ನಾಟಿ ಮಾಡಲಿಲ್ಲ. ಇಷ್ಟು ಸಾಮಾನ್ಯ ಜ್ಞಾನವಿಲ್ಲದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಪಡೆದ ನಾವೆ ಧನ್ಯರು ಎಂದು ಕಿಡಿಕಾರಿದರು.

ಸರಿಯಾದ ಸಮಯದಲ್ಲಿ ನಾಟಿ ಮಾಡದೇ ಹೋದರೆ, ಭತ್ತದ ಪೈರು ಚಳಿಗೆ ಸಿಕ್ಕಿ ಒಡೆ ಸರಿಯಾಗಿ ಬರಲ್ಲ ಎಂಬುವ ಕನಿಷ್ಠ ಜ್ಞಾನವು ಕೂಡ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ. ನಾಲೆಯಲ್ಲಿ ಜೋರಾಗಿ ನೀರು ಕೊಡದಿದ್ದರೆ ಕೊನೆ ಭಾಗಕ್ಕೆ ಹರಿಯಲ್ಲ, ನಾಟಿ ಮಾಡಲು ಆಗಲ್ಲ ಎಂದು ಆರೋಪಿಸಿದರು.

ADVERTISEMENT

ರೈತರು ಮಾಡಿರುವ ಖರ್ಚು ಸಹ ನಷ್ಟ ಆಗುತ್ತದೆ. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಬಂದಿದ್ದಾರೆ ಎಂದು ಗೊತ್ತಾಗಿದೆ. ಚಳವಳಿ ಸ್ಥಳಕ್ಕೆ ಬಂದು ನೀರು ಬಿಡುವುದಾಗಿ ಭರವಸೆ ನೀಡಿದರೆ ಚಳವಳಿ ವಾಪಸ್ ಪಡೆಯುತ್ತೇವೆ. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಚಳವಳಿಯಲ್ಲಿ 80 ವರ್ಷ ವಯಸ್ಸಾದ ರೈತರು ಸಹ ಭಾಗವಹಿಸಿದ್ದಾರೆ. ನೀರಾವರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಕನಿಷ್ಠ ಜ್ಞಾನ ಬೇಡವೇ? ಸಚಿವರು, ಶಾಸಕರು ನೀರು ಬಿಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಮದ್ದೂರು ಮತ್ತು ಮಳವಳ್ಳಿ ಶಾಸಕರು ನೀರು ಬಿಟ್ಟಿರುವುದನ್ನು ತೋರಿಸಲಿ, ಕಾಮಗಾರಿ ನಿಲ್ಲಿಸಿ ನೀರು ಬಿಡಲಿ, ನೀರು ನಿಲ್ಲಿಸಿದ ನಂತರ ಕಾಮಗಾರಿ ಮಾಡಲಿ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಆಗ್ರಹಿಸಿದರು.

ದೊಡ್ಡ ದೊಡ್ಡ ನಾಲೆಗಳನ್ನು ಬೇಗ ಮಾಡಿದ್ದಾರೆ. ಸಣ್ಣ ಕಾಲುವೆಗಳನ್ನು 15 ದಿನಗಳಲ್ಲಿ ಕಾಮಗಾರಿ ಮುಗಿಸಬಹುದಾಗಿದೆ. ಆದರೆ, ಬೇಕಂತಲೇ ತಡ ಮಾಡುತ್ತಿದ್ದಾರೆ. ರೈತರ ಜೀವ ತೆಗೆಯಲು ಅಧಿಕಾರಿಗಳು, ಜನಪ್ರತಿನಿಧಿಗಳು ನಿಂತಿದ್ದಾರೆ. ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ರಘುರಾಂ ಅವರು ಸ್ಥಳಕ್ಕೆ ಬಂದು ನೀರು ಬಿಡುವುದಾಗಿ ಆಶ್ವಾಸನೆ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಚಿಕ್ಕಮರಿಗೌಡ, ದೇಸಿಗೌಡ, ರವಿಕುಮಾರ್, ಬೋರಾಪುರ ಶಂಕರೇಗೌಡ, ಉಮೇಶ್, ವಿನೋದ್, ಬಾಬು, ಶಂಭೂಗೌಡ, ಲಿಂಗಪ್ಪಾಜಿ, ಪಟೇಲ್ ಬೋರೇಗೌಡ, ಬೊಮ್ಮೇಗೌಡ, ಶಿವಲಿಂಗೇಗೌಡ, ನಾಗಲಿಂಗು ಭಾಗವಹಿಸಿದ್ದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ ಮದ್ದೂರು ಮಳವಳ್ಳಿ ತಾಲ್ಲೂಕುಗಳಿಗೆ ನೀರು ಹರಿಸುವಂತೆ ನಾನು ನಿರಂತರವಾಗಿ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ರಘುರಾಂ ಅವರ ಸಂಪರ್ಕದಲ್ಲಿದ್ದು ಬೆಳೆ ಬೆಳೆದ ನಂತರ ಕಾಮಗಾರಿ ಮಾಡಿ ಈಗ ನೀರು ಹರಿಸುವಂತೆ ಹೇಳಿದರೂ ಇನ್ನೂ ಹರಿಸಿಲ್ಲ. ಅವರಿಗೆ ಯಾರ ಒತ್ತಡವೋ ಏನೋ ಗೊತ್ತಿಲ್ಲ ಕಾಮಗಾರಿ ಆರಂಭಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.