ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಶಿಫಾರಸು ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸರದಿ ಉಪವಾಸಕ್ಕೆ ಮಳವಳ್ಳಿಯ ಸಂಪೂರ್ಣ ಸಾವಯವ ಕೃಷಿಕರ ಸಂಘ ಮತ್ತು ಸೌಹಾರ್ದ ನಾಗರಿಕ ವೇದಿಕೆ ಶನಿವಾರ ಬೆಂಬಲ ನೀಡಿತು.
ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಆರಂಭಿಸಿರುವ ಉಪವಾಸದಲ್ಲಿ ವೇದಿಕೆಯ ಕಾರ್ಯದರ್ಶಿ ಎಂ.ರೂಪೇಶ್ ಕುಮಾರ್, ಮುದ್ದು ಮಲ್ಲು, ರೇಖಾ ಮಾದೇಶ್, ಎನ್.ಪವಿತ್ರಾ, ಆಶಾ ಆನಂದ್, ಭಾರತಿ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.
ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕಾವೇರಿ ಚಳವಳಿ ಸರ್ಕಾರ ಮತ್ತು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಹೋರಾಟಗಾರರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಕಳೆದ ನಾಲ್ಕು ತಿಂಗಳಿಂದ ಚಳವಳಿ ನೀರಿನ ಅಭಾವದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಾ ಬಂದಿದೆ. ಇದೀಗ ಸಚಿವರು ಬೇಸಿಗೆ ಬೆಳೆಗೆ ನೀರು ಇಲ್ಲ, ಕುಡಿಯಲು ಮಾತ್ರ ಬಳಕೆ ಎಂದಿದ್ದಾರೆ. ಮುನ್ನೆಚ್ಚರಿಕೆ ವಹಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಿಡಿಕಾರಿದರು.
ತಮಿಳುನಾಡಿಗೆ ನೀರು ಬಿಟ್ಟಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಯಾವ ಬಾಯಲ್ಲಿ ಹೇಳುತ್ತಾರೆ. ಬಿಳಿಗುಂಡ್ಲು ಅಳತೆ ಮಾಪನದಲ್ಲಿ ತೆಗೆಸಲಿ. ಯಾವಯಾವ ದಿನ, ಯಾವ ತಿಂಗಳು ಎಷ್ಟು ನೀರು ಹರಿದಿದೆ ಎಂಬ ವಾಸ್ತವ ಸತ್ಯ ಗೊತ್ತಾಗಲಿದೆ. ತಮಿಳುನಾಡು ಸರ್ಕಾರ ಇಷ್ಟು ನೀರು ಹರಿದು ಬಂದಿದ್ದು, ಮತ್ತಷ್ಟು ನೀರು ಕೊಡಬೇಕಾಗಿದೆ ಎಂದು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ಮುಂದೆ ಹೇಳಿದೆ. ಇಷ್ಟೆಲ್ಲ ಇದ್ದರೂ ನೆರೆ ರಾಜ್ಯಕ್ಕೆ ನೀರು ಬಿಟ್ಟಿಲ್ಲವಾ? ಎಂದು ಪ್ರಶ್ನಿಸಿದರು.
ವಿಶ್ವದಲ್ಲಿ ರೈತರ ಬದುಕು ಮತ್ತು ಅವರ ಚಿತ್ರಣದ ಬಗ್ಗೆ ಆಲೋಚನೆ ಮಾಡುವ ಸ್ಥಿತಿ ಇದೆ. ಮಣ್ಣಿನಿಂದ ಅನ್ನ ತೆಗೆಯುವ ರೈತರು, ಭೂಮಿಯೇ ಇಲ್ಲದೆ ಕೃಷಿ ಮಾಡುತ್ತಿರುವ ಕೃಷಿ ಕಾರ್ಮಿಕರ, ರೈತ ಮಹಿಳೆಯರ ಬದುಕು ಹಸನಾಗಲಿ, ಅವರ ಬದುಕಿಗೆ ಗೌರವ ಘನತೆ ಬರಲಿ ಎಂದು ವಿಶ್ವ ರೈತ ದಿನಾಚರಣೆಯಲ್ಲಿ ಹಾರೈಸುವೆ ಎಂದರು.
ಧರ್ಮದ ಪುನರುತ್ಥಾನಕ್ಕಾಗಿ ಭಾರತ ಯಾತ್ರೆ ಕೈಗೊಂಡಿರುವ ನರೇಂದ್ರ ಅಗರ್‌ವಾಲ್, ಕಾವೇರಿ ಕುಟುಂಬದ ಸದಸ್ಯ ಪ್ರೊ.ಕೆ.ಸಿ.ಬಸವರಾಜ್ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಮುದ್ದೇಗೌಡ, ಕನ್ನಡಸೇನೆ ಮಂಜುನಾಥ್, ಜೈ ಕರ್ನಾಟಕ ಪರಿಷತ್ತಿನ ಎಸ್.ನಾರಾಯಣ್, ಹೊಳಲು ಬದರಿ ನಾರಾಯಣ್, ಅರುಣಕುಮಾರ್, ಪುಟ್ಟಸ್ವಾಮಿ, ಸುಜಾತಾ, ಸಾಲುಮರದ ನಾಗರಾಜು, ಸುಶೀಲಮ್ಮ, ಜಯಸ್ವಾಮಿ, ನಿಂಗಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.