ADVERTISEMENT

ಶ್ರೀರಂಗಪಟ್ಟಣ: ನ್ಯಾನೊ ಯೂರಿಯಾ ಬಳಸದ ರೈತರು

ತಾಲ್ಲೂಕಿನ 22 ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಗೊಬ್ಬರ ಪೂರೈಕೆ

ಗಣಂಗೂರು ನಂಜೇಗೌಡ
Published 14 ಸೆಪ್ಟೆಂಬರ್ 2022, 5:57 IST
Last Updated 14 ಸೆಪ್ಟೆಂಬರ್ 2022, 5:57 IST
ದೊಡ್ಡಪಾಳ್ಯ ಗ್ರಾಮದ ರೈತ ಡಿ.ಎಂ. ರವಿ ಖರೀದಿಸಿ ಮನೆಯಲ್ಲೇ ಇಟ್ಟಿರುವ ದ್ರವ ರೂಪದ ನ್ಯಾನೊ ಯೂರಿಯಾ ಬಾಟಲಿಗಳು
ದೊಡ್ಡಪಾಳ್ಯ ಗ್ರಾಮದ ರೈತ ಡಿ.ಎಂ. ರವಿ ಖರೀದಿಸಿ ಮನೆಯಲ್ಲೇ ಇಟ್ಟಿರುವ ದ್ರವ ರೂಪದ ನ್ಯಾನೊ ಯೂರಿಯಾ ಬಾಟಲಿಗಳು   

ಶ್ರೀರಂಗಪಟ್ಟಣ: ಬೆಳೆಗೆ ಹಾಕಲು ಖರ್ಚು ಮತ್ತು ಹೆಚ್ಚು ಶ್ರಮ ಕೇಳುತ್ತದೆ ಎಂಬ ಕಾರಣಕ್ಕೆ ನ್ಯಾನೊ (ದ್ರವ ರೂಪ) ಯೂರಿಯಾ ಗೊಬ್ಬರ ಖರೀದಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ತಾಲ್ಲೂಕಿನ 22 ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಇಫ್ಕೊ ಕಂಪನಿಯು ಕಳೆದ ಏಪ್ರಿಲ್‌ನಿಂದ ನ್ಯಾನೊ ಯೂರಿಯಾ ಸರಬರಾಜು ಮಾಡಿದ್ದು, ಶೇ 3ರಷ್ಟೂ ಮಾರಾಟವಾಗಿಲ್ಲ. ಈ ಗೊಬ್ಬರ ಬಳಸುವ ವಿಧಾನ ರೈತರಿಗೆ ಸರಿಯಾಗಿ ಗೊತ್ತಿಲ್ಲದ ಕಾರಣ ಖರೀದಿಸಲು ರೈತರು ಮುಂದೆ ಬರುತ್ತಿಲ್ಲ.

‘ಈ ಗೊಬ್ಬರ ಬಳಸುವ ವಿಧಾನ ವನ್ನು ಕೃಷಿ ಇಲಾಖೆ ಅಥವಾ ರಸಗೊಬ್ಬರ ಕಂಪನಿ ರೈತರಿಗೆ ಸರಿಯಾಗಿ ತಿಳಿಸಿಲ್ಲ. ಅರ್ಧ ಲೀಟರ್‌ ಗೊಬ್ಬರ ವನ್ನು ಒಂದು ಎಕರೆಗೆ ಸಿಂಪಡಿಸಬೇಕು ಎಂದಷ್ಟೇ ಹೇಳಿದ್ದಾರೆ. ಹಾಗಾಗಿ ಅರ್ಧ ಎಕರೆ, 10 ಗುಂಟೆ ಕೃಷಿ ಜಮೀನು ಇರುವ ರೈತರು ಇದನ್ನು ಖರೀದಿಸುತ್ತಿಲ್ಲ. ಇದನ್ನು ಬಳಸಿದರೆ ಅಡ್ಡಪರಿಣಾಮ ಉಂಟಾಗಬಹುದು ಎಂಬ ಆತಂಕವೂ ಇದೆ. ಖರೀದಿಸಿರುವ ಬಾಟಲಿಗಳನ್ನು ಮನೆಯಲ್ಲೇ ಇಟ್ಟಿದ್ದೇನೆ’ ಎಂದು ದೊಡ್ಡಪಾಳ್ಯದ ರೈತ ಡಿ.ಎಂ. ರವಿ ಹೇಳುತ್ತಾರೆ.

ADVERTISEMENT

‘ಅರಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ (ಪಿಎಸಿಎಸ್‌) ಇಫ್ಕೊ ಕಂಪನಿ ಈ ಬಾರಿ 10 ಬಾಕ್ಸ್‌ (240 ಬಾಟಲಿ) ಗೊಬ್ಬರ ಸರಬರಾಜು ಮಾಡಿದೆ. ಇದರಲ್ಲಿ 20 ಬಾಟಲಿಗಳನ್ನು ಬಲವಂತವಾಗಿ ಮಾರಾಟ ಮಾಡಿದ್ದೇವೆ. ಭತ್ತದ ಬೆಳೆ ಹೊರತುಪಡಿಸಿದರೆ ಎತ್ತರವಾಗಿ ಬೆಳೆಯುವ ಕಬ್ಬು ಇತರ ಬೆಳೆಗಳಿಗೆ ಇದನ್ನು ಬಳಸುವುದು ಕಷ್ಟ. ಅವಧಿ ಮುಗಿದ ಈ ದ್ರವ ರೂಪದ ಯೂರಿಯಾ ಬಳಸಲು ಸಾಧ್ಯವಿಲ್ಲ. ಕಿಂಚಿತ್ತೂ ಬೇಡಿಕೆ ಇಲ್ಲ. ಸಂಘಕ್ಕೂ ನಷ್ಟವಾಗುತ್ತಿದೆ’ ಎಂದು ಅರಕೆರೆ ಪಿಎಸಿಎಸ್‌ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ್‌ ಹೇಳಿದರು.

ನ್ಯಾನೊ ಯೂರಿಯಾ ಬೆಲೆ ₹242

‘ತಾಲ್ಲೂಕಿನ 23 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೂ ನ್ಯಾನೊ ಯೂರಿಯಾ ಸರಬರಾಜಾಗಿದೆ. ಅರ್ಧ ಲೀಟರ್‌ ಗೊಬ್ಬರಕ್ಕೆ ₹242 ಬೆಲೆ ಇದೆ. ಒಂದು ಲೀಟರ್‌ ನೀರಿಗೆ 4 ಮಿ.ಲೀ. ಗೊಬ್ಬರ ಬೆರೆಸಿ ಕೀಟನಾಶಕದ ರೀತಿ ಸಿಂಪಡಿಸಬೇಕು. ಆದರೆ, ಇದನ್ನು ಸಿಂಪಡಿಸಲು ಕೈ ಪಂಪ್‌, ಕೂಲಿ ಇತರ ಖರ್ಚು ಬರುತ್ತದೆ ಎಂಬ ಕಾರಣಕ್ಕೆ ರೈತರು ಘನ ರೂಪದ ಯೂರಿಯಾ ಮಾತ್ರ ಖರೀದಿಸುತ್ತಿದ್ದಾರೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಿಶಾಂತ್‌ ಕೀಲಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.