ADVERTISEMENT

ಮಂಡ್ಯದ ಮೈಷುಗರ್‌: ಈ ವರ್ಷವೂ ರೈತರಿಗೆ ಮೋಸ

ಹೊರ ಜಿಲ್ಲೆ ಕಾರ್ಖಾನೆಗಳ ಮುಂದೆ ಕೈಚಾಚಬೇಕಾದ ಸ್ಥಿತಿ, ಇಚ್ಛಾಶಕ್ತಿ ಇಲ್ಲದ ಜನಪ್ರತಿನಿಧಿಗಳು

ಎಂ.ಎನ್.ಯೋಗೇಶ್‌
Published 3 ಜೂನ್ 2020, 2:04 IST
Last Updated 3 ಜೂನ್ 2020, 2:04 IST
ಮೈಷುಗರ್‌ ಕಾರ್ಖಾನೆ (ಸಂಗ್ರಹ ಚಿತ್ರ)
ಮೈಷುಗರ್‌ ಕಾರ್ಖಾನೆ (ಸಂಗ್ರಹ ಚಿತ್ರ)   

ಮಂಡ್ಯ: ಜೂನ್‌ ಆರಂಭವಾದರೂ ಮೈಷುಗರ್ ಕಾರ್ಖಾನೆ ಆರಂಭವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹಿಂದಿನ ವರ್ಷದಂತೆ ಈ ಬಾರಿಯೂ ಅನ್ಯ ಜಿಲ್ಲೆ ಸಕ್ಕರೆ ಕಾರ್ಖಾನೆಗಳ ಮುಂದೆ ಕೈಚಾಚಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದ್ದು ಕಬ್ಬು ಬೆಳೆಗಾರರು ಆತಂಕಗೊಂಡಿದ್ದಾರೆ.

ಕಾರ್ಖಾನೆ ವ್ಯಾಪ್ತಿಯ 8 ಲಕ್ಷ ಟನ್‌ಗೂ ಹೆಚ್ಚು ಕಬ್ಬು ಕಟಾವಿಗೆ ಬರುತ್ತಿದ್ದು ಜುಲೈ ಮೊದಲ ವಾರದಲ್ಲಿ ಕಡಿಯಲೇಬೇಕಾಗಿದೆ. ಆದರೆ ಮೈಷುಗರ್ ಕಾರ್ಖಾನೆಗೆ ಪುನಶ್ಚೇತನ ನೀಡಿ, ಕಬ್ಬು ಅರೆಯಲು ಸಿದ್ಧಗೊಳಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ಪ್ರಕಟಿಸಿಲ್ಲ.

ಸರ್ಕಾರವೇ ಕಾರ್ಖಾನೆ ನಡೆಸಬೇಕೋ, ಖಾಸಗೀಕರಣ ಮಾಡಬೇಕೋ, ಕಾರ್ಯಾಚರಣೆ– ನಿರ್ವಹಣೆಗೆ (ಒ ಅಂಡ್‌ ಎಂ) ವಹಿಸಬೇಕೋ ಎಂಬ ಜಿಜ್ಞಾಸೆಯಲ್ಲೇ ಹಲವು ತಿಂಗಳು ಕಳೆದು ಹೋಗಿದ್ದು ರೈತರ ಹಿತ ಕಾಯುವ ಯಾವುದೇ ಕ್ರಮ ಕೈಗೊಂಡಿಲ್ಲ.

ADVERTISEMENT

ಕಾರ್ಖಾನೆ ಯಂತ್ರಗಳು ತುಕ್ಕು ಹಿಡಿದಿದ್ದು ಯುದ್ಧೋಪಾದಿಯಲ್ಲಿ ಶುಚಿಗೊಳಿಸಿದರೂ ಕನಿಷ್ಠ ಮೂರು ತಿಂಗಳ ಕಾಲ ಹಿಡಿಯುತ್ತದೆ. ಕಬ್ಬು ಕ್ಯಾರಿಯರ್‌ನಿಂದ ಹಿಡಿದು ಸಕ್ಕರೆ ಬೀಳುವ ಘಟಕದವರೆಗೂ (ಷುಗರ್‌ ಬಿನ್‌) ಯಂತ್ರಗಳಿಗೆ ಪುನಶ್ಚೇತನ ನೀಡಬೇಕಾಗಿದೆ. ಕಳೆದ ಬಾರಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಎರಡೂ ಬಾಯ್ಲರ್‌ ಬದಲಾಯಿಸಲಾಗಿದೆ.

ಒಂದು ಬಾಯ್ಲರ್‌ ಕಡಿಮೆ ಎಂದರೂ 20 ವರ್ಷ ಕೆಲಸ ಮಾಡಬೇಕು. ಆದರೆ ಕಳಪೆ ಯಂತ್ರೋಪಕರಣ ಅಳವಡಿಸಿದ್ದು ಅವು ಕಾರ್ಯಾರಂಭವನ್ನೇ ಮಾಡಲಿಲ್ಲ. ರಾಸಾಯನಿಕ ಪ್ರಕ್ರಿಯೆ ಮೂಲಕ ಬಾಯ್ಲರ್‌ಗಳನ್ನು ಸುಸ್ಥಿತಿಯಲ್ಲಿ ಇಡಬೇಕು. ಆದರೆ 2018 ಏಪ್ರಿಲ್‌ ತಿಂಗಳ ನಂತರ ಕಾರ್ಖಾನೆ ಸ್ಥಗಿತಗೊಂಡಿವೆ. ಹೀಗಾಗಿ ಹೊಸ ಯಂತ್ರಗಳನ್ನೇ ಅಳವಡಿಸಬೇಕಾಗಿದ್ದು ಈ ವರ್ಷ ಕಾರ್ಖಾನೆ ಆರಂಭವಾಗುವುದು ಕನಸಿನ ಮಾತಾಗಿದೆ ಎಂದು ರೈತರು ಆರೋಪಿಸುತ್ತಾರೆ.

‘ಕಾರ್ಖಾನೆ ಆರಂಭದ ವಿಚಾರದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಾಟಕ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಜುಲೈ ತಿಂಗಳಲ್ಲಿ ಕಾರ್ಖಾನೆ ಕಬ್ಬುಅರೆಯಲು ಸಾಧ್ಯವೇ ಇಲ್ಲ. ಈ ವರ್ಷವೂ ಸರ್ಕಾರ ನಮಗೆ ಮೋಸ ಮಾಡಿದೆ. ನಾವು ಮತ್ತೊಮ್ಮೆ ಹೊರ ಜಿಲ್ಲೆಯ ಕಾರ್ಖಾನೆಗಳ ಮುಂದೆ ಭಿಕ್ಷೆಗೆ ನಿಲ್ಲಬೇಕಾಗಿದೆ. ಆ ಕಾರ್ಖಾನೆಗಳ ಫೀಲ್ಡ್‌ಮ್ಯಾನ್‌ಗಳು ಶ್ರೀಮಂತರನ್ನಾಗಿ ಮಾಡುವುದು ರೈತರ ಪಾಲಿನ ಕರ್ಮವಾಗಿದೆ. ಬೇರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದರೆ ರೈತನಿಗೆ ಪ್ರತಿ ಟನ್‌ಗೆ ₹ 1 ಸಾವಿರ ನಷ್ಟವಾಗುತ್ತದೆ’ ಎಂದು ರೈತರಾದ ರಾಮೇಗೌಡ, ಶಂಕರ್‌ ನೋವು ವ್ಯಕ್ತಪಡಿಸಿದರು.

ಜೂನ್‌ 4ರಂದು ಸಭೆ: ಈ ವರ್ಷ ಕಾರ್ಖಾನೆ ಆರಂಭವಾಗುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿರುವ ಹಿನ್ನೆಲೆಯಲ್ಲಿ ರೈತ ಹಿತರಕ್ಷಣಾ ಸಮಿತಿ ಜೂನ್‌ 4ರಂದು ಸಭೆ ಕರೆದಿದೆ. ಅಂದು ಕಾರ್ಖಾನೆ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜಯಂತಿಯೂ ಆಗಿದ್ದು ಮುಂದಿನ ಹಂಗಾಮಿನಲ್ಲಿ ಬೆಳೆಗಾರರ ಹಿತ ರಕ್ಷಿಸುವ ಸಂಬಂಧ ಚರ್ಚೆ ನಡೆಯಲಿದೆ.

‘ಕಾರ್ಖಾನೆಯನ್ನು ನಡೆಸಬೇಕು, ರೈತರ ಹಿತ ಕಾಪಾಡಬೇಕು ಎಂಬ ಇಚ್ಛಾಶಕ್ತಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿ ಯಾವು ಜನಪ್ರತಿನಿಧಿಗಳಿಗೂ ಇಲ್ಲ. ಕಳೆದ ಬಾರಿ ಕಬ್ಬು ಪೂರೈಸಿದ ಸಾಗಣೆ ವೆಚ್ಚವನ್ನೂ ಕೊಡಲಿಲ್ಲ. ಬೇಕಾಬಿಟ್ಟಿಯಾಗಿ ಕಬ್ಬು ಮಾರಾಟ ಮಾಡಬೇಕಾಯಿತು. ಅಧಿಕಾರಿಗಳು, ಜನಪ್ರತಿನಿಧಿಗಳು ನಿತ್ಯ ರೈತರನ್ನು ಕೊಲ್ಲುತ್ತಿದ್ಧಾರೆ’ ಎಂದು ರೈತಸಂಘ, ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಆರೋಪಿಸಿದರು.

*****

22ಕ್ಕೆ ಆನ್‌ಲೈನ್‌ನಲ್ಲೇ ಸಾಮಾನ್ಯ ಸಭೆ!

5 ವರ್ಷಗಳ ನಂತರ ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಕಾರ್ಖಾನೆಯ ಸಾಮಾನ್ಯ ಸಭೆ ಕರೆಯಲಾಗಿದೆ. ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲೇ ಸಭೆ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಬಹುತೇಕ ಷೇರುದಾರರು ರೈತರು, ಆನ್‌ಲೈನ್‌ನಲ್ಲಿ ಮುಕ್ತ ಅಭಿಪ್ರಾಯ ತಿಳಿಸಲು ಸಾಧ್ಯವಿಲ್ಲ. ಎಷ್ಟೋ ಮಂದಿ ಮೃತಪಟ್ಟಿದ್ದಾರೆ. ಅದರ ಯಾವುದೇ ಮಾಹಿತಿ ಇಲ್ಲ. ಷೇರುದಾರರಿಗೆ ಆಹ್ವಾನ ಪತ್ರಿಕೆ, ಅಜೆಂಡಾ ಪುಸ್ತಕವನ್ನೂ ಕಳುಹಿಸಿಲ್ಲ. ಕೊರೊನಾ ನೆಪದಲ್ಲಿ ಸಭೆ ಕರೆಯಲಾಗಿದೆ, ಕೊರೊನಾ ಹಾವಳಿ ಮುಗಿದ ನಂತರ ಸಭೆ ನಡೆಸಬಹುದಾಗಿತ್ತು’ ಎಂದು ರೈತ ನಾಯಕಿ ಸುನಂದಾ ಜಯರಾಂ ಅಸಮಾಧಾನ ವ್ಯಕ್ತಪಡಿಸಿದರು.


*********

ವಸಂತಕುಮಾರ್‌ ನೂತನ ಎಂ.ಡಿ

ಹಿರಿಯ ಐಎಎಸ್‌ ಅಧಿಕಾರಿ ವಸಂತ್‌ ಕುಮಾರ್‌ ಅವರನ್ನು ಮೈಷುಗರ್‌ ಕಾರ್ಖಾನೆಯ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶಾಂತಾರಾಮ್‌ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೂನ್‌ 1ರಿಂದ ನೂತನ ಎಂಡಿಯನ್ನು ನೇಮಕ ಮಾಡಲಾಗಿದೆ

ವಸಂತಕುಮಾರ್‌ ಅವರು ಮಳವಳ್ಳಿ ಮೂಲದವರಾಗಿದ್ದು ಕಾರ್ಖಾನೆಗೆ ಯಾವ ರೂಪ ನೀಡುತ್ತಾರೆ ಎಂಬ ನಿರೀಕ್ಷೆ ಗರಿಗೆದರಿವೆ. ಉತ್ತಮ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಬೇಕು ಎಂದು ರೈತ ಮುಖಂಡರು ಮೊದಲಿನಿಂದಲೂ ಒತ್ತಾಯ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.