ADVERTISEMENT

ನಾಲ್ವರು ಉಪ ನೋಂದಣಾಧಿಕಾರಿ, ಮೂವರು ಪತ್ರ ಬರಹಗಾರರಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 11:52 IST
Last Updated 1 ಏಪ್ರಿಲ್ 2021, 11:52 IST

ಮಂಡ್ಯ: ರಾಜಸ್ವ ಹಣ ದುರುಪಯೋಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಸಿವಿಲ್‌, ಜೆಎಂಎಫ್‌ಸಿ ನ್ಯಾಯಾಧೀಶರು ನಾಲ್ವರು ಉಪ ನೋಂದಣಾಧಿಕಾರಿ, ಮೂವರು ಪತ್ರ ಬರಹಗಾರರಿಗೆ ಕ್ರಮವಾಗಿ 4, 5 ವರ್ಷ ಜೈಲು ಶಿಕ್ಷೆ, ₹ 1.25 ಕೋಟಿ ದಂಡ ವಿಧಿಸಿ ಸೋಮವಾರ (ರ್ಮಾಚ್‌ 29) ತೀರ್ಪು ನೀಡಿದ್ದಾರೆ.

2006ಕ್ಕೂ ಹಿಂದೆ ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಉಪ ನೋಂದಣಾಧಿಕಾರಿಗಳಾಗಿದ್ದ ಎಸ್‌.ಎನ್‌.ಪ್ರಭಾ, ಚಲುವರಾಜು, ಪ್ರಭಾರ ಉಪ ನೋಂದಣಾಧಿಕಾರಿಗಳಾಗಿದ್ದ ಲೀಲಾವತಿ, ಸುನಂದಾ ಹಾಗೂ ಪತ್ರ ಬರಹಗಾರರಾಗಿದ್ದ ಬಿ.ಕೆ.ರಾಮರಾವ್‌, ನರಸಿಂಹಮೂರ್ತಿ, ಚಂದ್ರಶೇಖರ್‌ ಶಿಕ್ಷೆಗೆ ಒಳಗಾದವರು.

ಒಟ್ಟು 154 ಪ್ರಕರಣಗಳಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ 2006ರಲ್ಲಿ ಉಪ ನೋಂದಣಾಧಿಕಾರಿಯಾಗಿದ್ದ ನರಸಿಂಹಯ್ಯ ಪಶ್ಚಿಮ ಠಾಣೆಗೆ ದೂರು ಸಲ್ಲಿಸಿದರು. ಇದರ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಮೇಶ್‌ ಎಸ್ ಗಾಣಿಗೇರ್‌ ತೀರ್ಪು ನೀಡಿದ್ದಾರೆ.

ADVERTISEMENT

ಎಸ್‌.ಎನ್‌.ಪ್ರಭಾ ಸದ್ಯ ಬೆಂಗಳೂರು ಐಜಿಆರ್‌ (ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ರಿಜಿಸ್ಟ್ರೇಷನ್‌) ಕಚೇರಿಯಲ್ಲಿದ್ದಾರೆ. ಚೆಲುವರಾಜು ಶೃಂಗೇರಿ ಉಪ ನೋಂದಣಾಧಿಕಾರಿಯಾಗಿದ್ದಾರೆ. ಲೀಲಾವತಿ ಮದ್ದೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ, ಸುನಂದಾ ಬೆಂಗಳೂರು ಎಲೆಕ್ಟ್ರಾನಿಕ್‌ ಸಿಟಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸರ್ಕಾರಿ ಅಭಿಯೋಜಕ ಎಂ.ಜಿ.ಸುರೇಶ್‌ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.